ಮುಂಬೈ, ಏ.03(DaijiworldNews/TA): ಆರ್ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ತಂಡದಲ್ಲಿ ಆಡುತ್ತಿರುವ ಸಂಧರ್ಭ ಗಾಯಗೊಂಡಿದ್ದರು. ಬುಧವಾರ ನಡೆದ ಐಪಿಎಲ್ 2025 ರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಟಿ ತಂಡ ಆರ್ಸಿಬಿ ವಿರುದ್ಧದ ಚೇಸಿಂಗ್ನ ಐದನೇ ಎಸೆತದಲ್ಲಿ, ಕೃನಾಲ್ ಪಾಂಡ್ಯ ಎಸೆತದಲ್ಲಿ ಸಾಯಿ ಸುದರ್ಶನ್ ಸ್ವೀಪ್ ಶಾಟ್ ಹೊಡೆದರು. ಡೀಪ್ ಮಿಡ್-ವಿಕೆಟ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಚೆಂಡನ್ನು ಹಿಡಿಯಲು ಪ್ರಯತ್ನಿಸುವಾಗ ಅವರ ಹೆಬ್ಬೆರಳಿಗೆ ಗಾಯವಾಯಿತು. ಬಾಲ್ ಕೊಹ್ಲಿಯ ಕೈಗಳ ಮೂಲಕ ಹಾದು ಹೋಗಿ ಬೌಂಡರಿ ತಲುಪಿತು. ವಿರಾಟ್ ನೋವಿನಿಂದ ಬಳಲುತ್ತಿದ್ದರು.
ಗಾಯದ ಬಗ್ಗೆ ಅಭಿಮಾನಿಗಳಿಗೆ ನಂತರ ಆರ್ಸಿಬಿ ಮುಖ್ಯ ಕೋಚ್ ಫ್ಲವರ್ ಸ್ಪಷ್ಟನೆ ನೀಡಿದರು. "ವಿರಾಟ್ ಚೆನ್ನಾಗಿದ್ದಾರೆ" ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಫ್ಲವರ್ ಹೇಳಿದರು.
ಹೀಗಾಗಿ ಏಪ್ರಿಲ್ 7 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಲಾಗಿದೆ. ಏಕೆಂದರೆ ಈ ಪಂದ್ಯಕ್ಕೆ ಇನ್ನೂ ಮೂರು ದಿನಗಳ ಕಾಲಾವಕಾಶವಿದ್ದು, ಅದರೊಳಗೆ ಅವರ ಬೆರಳಿನ ಗಾಯವು ಸಂಪೂರ್ಣ ಗುಣಮುಖವಾಗುವ ನಿರೀಕ್ಷೆಯಿದೆ.