ಮ್ಯಾಂಚೆಸ್ಟರ್, ಜೂ 16 (Daijiworld News/SM): ಬದ್ದ ವೈರಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವರುಣ ಪದೇಪದೆ ಅಡ್ಡಿಪಡಿಸಿದ್ದಾನೆ. ಆದರೂ, ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ರೋಹಿತ್ ಶರ್ಮ ಶತಕ ಸಿಡಿಸಿ ಮಿಂಚಿದ್ದಾರೆ.
ಈ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ವೃತ್ತಿ ಬದುಕಿನ 24ನೇ ಒಡಿಐ ಶತಕ ಸಿಡಿಸಿ ಅಬ್ಬರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡದ ಪರ ರೋಹಿತ್ ಶರ್ಮ ಹಾಗೂ ರಾಹುಲ್ ಉತ್ತಮ ಆರಂಭ ನೀಡಿದರು. ಈ ಪೈಕಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್, ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್, ನೋಡ ನೋಡುತ್ತಿದ್ದಂತೆಯೇ 85 ಎಸೆತಗಳಲ್ಲಿ ಶತಕ ಸಿಡಿಸಿ ಶತಕ ಪೂರೈಸಿದರು. ಪ್ರಸಕ್ತ ವಿಶ್ವಕಪ್ ನಲ್ಲಿ ರೋಹಿತ್ ಅವರ 2ನೇ ಶತಕ ಇದಾಗಿದೆ.
ಇನ್ನು ಸಾಕಷ್ಟು ಕುತೂಹಲ ಕೆರಳಿಸಿರುವ ಇಂಡೋ-ಪಾಕ್ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮ ಹಾಗೂ ಕೆ.ಎಲ್. ರಾಹುಲ್ ದಾಖಲೆ ಬರೆದಿದ್ದಾರೆ. ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 100 ರನ್ ಗಳಿಸಿದ ವಿಶ್ವದ ಐದನೇ ಜೋಡಿ ಎಂಬುದು ರೋಹಿತ್-ರಾಹುಲ್ ಬರೆದಿರುವ ದಾಖಲೆಯಾಗಿದೆ.