ಮುಂಬೈ, ಏ.08 (DaijiworldNews/AA): ಮುಂಬೈ ಇಂಡಿಯನ್ಸ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆದ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ. ಈ ಮೂಲಕ ವಾಂಖೆಡೆ ಸ್ಟೇಡಿಯಂನಲ್ಲಿ ಆರ್ಸಿಬಿ ತನ್ನ ಗೆಲುವನ್ನ ಮರಳಿ ಪಡೆದಿದೆ. ಆದರೆ ಈ ಗೆಲುವಿನ ಬೆನ್ನಲ್ಲೇ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ದಂಡದ ಶಿಕ್ಷೆಗೆ ಗುರಿಯಾಗುತ್ತಿರುವ 4ನೇ ನಾಯಕ ರಜತ್ ಪಾಟಿದಾರ್.
ರಜತ್ ಪಾಟಿದಾರ್ ಅವರಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ, ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ರಿಯಾನ್ ಪರಾಗ್ಗೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಪಂದ್ಯದ ವೇಳೆ ಬೌಂಡರಿ ಲೈನ್ನಿಂದ ಒರ್ವ ಫೀಲ್ಡರ್ನನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.