ಮ್ಯಾಂಚೆಸ್ಟರ್, ಜೂ 16 (Daijiworld News/SM): ಇಂಡೋ-ಪಾಕ್ ಪಂದ್ಯ ಅಂದಾಕ್ಷಣ ಎಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುವುದು ಸಾಮಾನ್ಯ. ಭಾರತ-ಪಾಕಿಸ್ತಾನ ಮಾತ್ರವಲ್ಲದೆ ಇಡೀ ವೀಶ್ವವೇ ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿರುತ್ತದೆ. ರವಿವಾರ ಈ ಹೈ ವೋಲ್ಟೇಜ್ ಪಂದ್ಯನಡೆದಿದ್ದು ಇದರಲ್ಲಿ ರೋಹಿತ್ ಹೀರೋ ಎನಿಸಿಕೊಂಡಿದ್ದಾರೆ.
ಒಂದೆಡೆ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಈ ಬಾರಿಯ ವಿಶ್ವಕಪ್ ನಲ್ಲಿ 2ನೇ ಶತಕ ದಾಖಲಿಸಿದ ಕೀರ್ತಿಯೂ ದಕ್ಕಿತ್ತು. ಮತ್ತೊಂದೆಡೆ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ದಾಖಲೆಯನ್ನು ಕೂಡ ತನ್ನ ಹೆಸರಿಗೆ ಬರೆಸಿಕೊಂಡರು. ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು. ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಧೋನಿ 355 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ದಾಖಲೆಯನ್ನು ರೋಹಿತ್ ಈ ಹಿಂದೆಯೇ ಸಮಗಟ್ಟಿದ್ದರು. ಇಂಡೋ-ಪಾಕ್ ಕದನದಲ್ಲಿ 3 ಸಿಕ್ಸರ್ ಗಳನ್ನು ಭಾರಿಸುವ ಮೂಲಕ ಧೋನಿ ದಾಖಲೆ ಮುರಿದಿದ್ದು 358 ಸಿಕ್ಸರ್ ಗಳನ್ನು ರೋಹಿತ್ ಸಿಡಿಸಿದಂತಾಗಿದೆ.
ಈ ನಡುವೆ, ಮತ್ತೊಂದು ದಾಖಲೆ ಕೂಡ ಬರೆದಿದ್ದಾರೆ. ರೋಹಿತ್ ಶರ್ಮಾ, ಸತತ ಐದು ಏಕದಿನ ಪಂದ್ಯಗಳಲ್ಲಿ ಐದು ಬಾರಿ ಐವತ್ತಕ್ಕೂ ಹೆಚ್ಚು ರನ್ ಪೇರಿಸಿದ ಭಾರತೀಯ ಬ್ಯಾಟ್ಸ್ಮೆನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಭಾರತದ ನಾಲ್ವರು ಬ್ಯಾಟ್ಸ್ಮೆನ್ಗಳು ಇದೇ ದಾಖಲೆಯನ್ನ ಸ್ಥಾಪಿಸಿದ್ದರು. ಈಗ ಐದನೇ ಬ್ಯಾಟ್ಸ್ಮೆನ್ ಆಗಿ ರೋಹಿತ್ ಶರ್ಮಾ ಈ ದಾಖಲೆ ಬರೆದಿದ್ದಾರೆ.
ಈ ಹಿಂದೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ಅಂಜಿಕ್ಯಾ ರಹಾನೆ ೫೦ಕ್ಕೂ ಅಧಿಕ ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಕೂಡ ಇದೇ ದಾಖಲೆ ಸರಿಗಟ್ಟಿದ್ದಾರೆ.