ಮ್ಯಾಂಚೆಸ್ಟರ್, ಜೂ 18 (Daijiworld News/SM): ಈ ಬಾರಿಯ ವಿಶ್ವಕಪ್ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ. ಇದೀಗ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಏಕದಿನ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ 17 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.
17 ಸಿಕ್ಸರ್ ಸಿಡಿಸಿ ಮಾರ್ಗನ್ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆಗೆ ಮಾರ್ಗನ್ ಪಾತ್ರರಾಗಿದ್ದಾರೆ. ಮಾರ್ಗನ್ ಅವರು ಮಂಗಳವಾರ ವಿಶ್ವಕಪ್ ಪಂದ್ಯದಲ್ಲಿ ಆಫ್ಘಾನ್ ವಿರುದ್ಧ 71 ಎಸೆತಗಳಲ್ಲಿ 4 ಬೌಂಡರಿ, 17 ಸಿಕ್ಸರ್ ಸಹಾಯದಿಂದ 148 ರನ್ ಗಳಿಸಿದರು.
ಈ ಮೂಲಕ ಈ ಹಿಂದಿನ ಭಾರತದ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಅವರು ಸಿಡಿಸಿದ 16 ಸಿಕ್ಸರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಏಕದಿನದಲ್ಲೇ ನಾಲ್ಕನೇ ಅತಿ ವೇಗದ ಶತಕ ಸಿಡಿಸಿದ ಕೀರ್ತಿಗೂ ಮಾರ್ಗನ್ ಪಾತ್ರರಾಗಿದ್ದಾರೆ.
ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ನಾಯಕ ಇಯಾನ್ ಮಾರ್ಗನ್ ಸಿಡಿಲಬ್ಬರದ ಶತಕ (148) ಮತ್ತು ಜಾನಿ ಬೈರ್ಸ್ಟೋವ್ (90) ಹಾಗೂ ಜೋ ರೂಟ್ (88) ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 397 ರನ್ಗಳ ಬೃಹತ್ ಮೊತ್ತ ಪೇರಿಸಿತು.