ಲಾಹೋರ್, ಜೂ19(Daijiworld News/SS): ಪಾಕಿಸ್ತಾನ ತಂಡವನ್ನು ಕ್ರಿಕೆಟ್ನಿಂದ ನಿಷೇಧಿಸಬೇಕು ಎಂದು ಪಾಕ್ ಅಭಿಮಾನಿಯೊಬ್ಬರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಜೂನ್ 16, ಭಾನುವಾರ ಇಂಗ್ಲೆಂಡ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಪಾಕ್ ಹೀನಾಯವಾಗಿ ಸೋಲು ಕಂಡಿದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ 89 ರನ್ಗಳ ಭರ್ಜರಿ ಜಯವನ್ನು ಕಂಡಿತು.
ಪಾಕಿಸ್ತಾನ ಈ ಬಾರಿಯ ವಿಶ್ವಕಪ್ನಲ್ಲಿ ಆಡಿದ ಒಟ್ಟು ಐದು ಪಂದ್ಯಗಳಲ್ಲಿ ಕೇವಲ ಮೂರು ಅಂಕವನ್ನು ಪಡೆದು ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಭಾರತ ತಂಡದ ವಿರುದ್ಧ ಹೀನಾಯವಾಗಿ ಸೋತಿದೆ. ಇದನ್ನು ಸಹಿಸಿಕೊಳ್ಳಲಾಗದ ಪಾಕ್ ಅಭಿಮಾನಿಗಳು ಪಾಕ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಮಾಜಿ ನಾಯಕ ಹಾಗೂ ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಇಂಜಮಾಮ್ ಉಲ್ ಹಕ್'ರನ್ನು ನಿಷೇಧಿಸುವಂತೆ ಅರ್ಜಿದಾರ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ಬದ್ಧ ವೈರಿಗಳ ಕಾದಾಟದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡವು ಕ್ರಿಕೆಟ್ ಅಭಿಮಾನಿಗಳಿಂದ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ.