ಬೆಂಗಳೂರು, ಮೇ. 21 (DaijiworldNews/AA): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ ಐಪಿಎಲ್ನ ಉಳಿದ ಪಂದ್ಯಗಳಿಗಾಗಿ ಭಾರತಕ್ಕೆ ಮರಳುವುದು ಖಚಿತವಾಗಿದ್ದು, ಮತ್ತೆ ಆರ್ಸಿಬಿ ಪರ ಅವರು ಕಣಕ್ಕಿಳಿಯಲಿದ್ದಾರೆ.

ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಹೇಝಲ್ವುಡ್, ಕಳೆದ ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಅವರು ಭುಜದ ನೋವಿಗೆ ತುತ್ತಾಗಿದ್ದರು. ಆ ಬಳಿಕ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆಯಲ್ಲಿ ಐಪಿಎಲ್ ಸ್ಥಗಿತಗೊಂಡಿದ್ದರಿಂದ ಹೇಝಲ್ವುಡ್ ತವರಿಗೆ ಮರಳಿದ್ದು, ಅಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಜೋಶ್ ಹೇಝಲ್ವುಡ್ ಅಭ್ಯಾಸವನ್ನು ಆರಂಭಿಸಿದ್ದು, ಮೇ 25 ರಂದು ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೆ 23 ರಂದು ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಕ್ಕೂ ಜೋಶ್ ಹೇಝಲ್ವುಡ್ ಅಲಭ್ಯರಾಗಲಿದ್ದು, ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.
ಇನ್ನು ಹೇಝಲ್ವುಡ್ ತಂಡಕ್ಕೆ ಮರಳುತ್ತಿರುವುದು ಆರ್ಸಿಬಿ ಪಾಲಿಗೆ ಶುಭ ಸೂಚನೆಯಾಗಿದೆ. ಏಕೆಂದರೆ ಈ ಬಾರಿ ಹೇಝಲ್ವುಡ್ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಗಳಿಸಿದ್ದಾರೆ. ಅಂದರೆ ಹೇಝಲ್ವುಡ್ 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಆಸೀಸ್ ವೇಗಿ ಒಟ್ಟು 18 ವಿಕೆಟ್ಗಳನ್ನು ಪಡೆದಿದ್ದಾರೆ. ಜೊತೆಗೆ 10 ಪಂದ್ಯಗಳಲ್ಲಿ ಒಟ್ಟು ೧೦೩ ಡಾಟ್ ಬಾಲ್ಗಳನ್ನು ಎಸೆದಿದ್ದಾರೆ.