ಮುಂಬೈ, ಜೂ. 01 (DaijiworldNews/AA): ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್ ಮತ್ತು ಮಚ್ಲಿಶಹರ್ ಸಂಸದೆ ಪ್ರಿಯಾ ಸರೋಜ್ ನವೆಂಬರ್ 18 ರಂದು ಹಸೆಮಣೆ ಏರಲಿದ್ದಾರೆ.

ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ಉಂಗುರ ಸಮಾರಂಭ ಜೂನ್ 8 ರಂದು ಲಕ್ನೋದ ಸೆವೆನ್ ಸ್ಟಾರ್ ಹೋಟೆಲ್ನಲ್ಲಿ ನಡೆಯಲಿದೆ. ನವೆಂಬರ್ 18 ರಂದು ವಾರಣಾಸಿಯ ತಾಜ್ ಹೋಟೆಲ್ನಲ್ಲಿ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.
ಈ ವಿವಾಹ ಸಮಾರಂಭದಲ್ಲಿ ಅನೇಕ ದೊಡ್ಡ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ. ಪ್ರಿಯಾ ಅವರದ್ದು ರಾಜಕೀಯ ಕುಟುಂಬವಾಗಿದ್ದು, ಅವರ ತಂದೆ ಸಮಾಜವಾದಿ ಪಾರ್ಟಿ ಶಾಸಕರಾದರೆ, ಪ್ರಿಯಾ ಸರೋಜ್ ಸಂಸದೆ. ಹೀಗಾಗಿ ಮದುವೆ ಕಾರ್ಯಕ್ರಮಗಳಿಗೆ ಕ್ರಿಕೆಟಿಗರೊಂದಿಗೆ ರಾಜಕಾರಣಿಗಳು ಕೂಡ ಭಾಗವಹಿಸಲಿದ್ದಾರೆ.
ಇನ್ನು ಭಾರತ ಟಿ20 ತಂಡದ ಆಟಗಾರನಾಗಿರುವ ರಿಂಕು ಸಿಂಗ್ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಖಾಯಂ ಸದಸ್ಯ. ಆದರೆ ಈ ಬಾರಿಯ ಟೂರ್ನಿಯಲ್ಲಿ ರಿಂಕು ಸಿಂಗ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದೀಗ ನವೆಂಬರ್ನಲ್ಲಿ ರಿಂಕು ಸಿಂಗ್ ಅವರ ಮದುವೆ ನಿಗದಿಯಾಗಿರುವುದರಿಂದ ಅವರು ಆ ಅವಧಿಯಲ್ಲಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.