ಸೌತಮ್ಟನ್, ಜೂ 22 (Daijiworld News/SM): ಕ್ರಿಕೆಟ್ ಕೂಸು ಅಫ್ಘಾನಿಸ್ತಾನ ವಿರುದ್ಧ ತೀವ್ರ ಪರದಾಟವನ್ನು ಎದುರಿಸಿದ ಟೀಂ ಇಂಡಿಯಾ ಕೊನೆಗೂ ಪಂದ್ಯ ಜಯಿಸಿದೆ. ಈ ಮೂಲಕ ಗೆಲುವುನ ನಾಗಲೋಟ ಮುಂದುವರೆಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ರನ್ ತೆಗೆಯಲು ಪರದಾಡಿತು. ಅಲ್ಲದೆ ಅಫ್ಘಾನ್ ಆರಂಭದಲ್ಲೇ ಆಘಾತ ನೀಡಿತು. ಸ್ಪೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ 1 ರನ್ ಗೆ ನಿರ್ಗಮಿಸಿದರು. ಈ ಆಘಾತದಿಂದ ಹೊರ ಬರಲು ತಂಡ ಪರದಾಡುವಂತಾಯಿತು. ಕ್ರಿಕೆಟ್ ಕೂಸು ಎಂದೇ ಕರೆಯಲ್ಪಡುವ ಅಫ್ಘಾನ್ ವಿರುದ್ಧ ರನ್ ಕಲೆ ಹಾಕಲು ಟೀಂ ಇಂಡಿಯಾ ಪರಾದಾಡುತ್ತಿದ್ದ ವಿಚಾರ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿತು.
೫೩ ಎಸೆತಗಳನ್ನು ಎದುರಿಸಿದ ರಾಹುಲ್ ಕೇವಲ 30 ರನ್ ಪೇರಿಸಿದರು. ನಾಯಕ ವಿರಾಟ್ ಕೊಹ್ಲಿ ಜವಾಬ್ದಾರಿಯಾಟವಾಡಿದರು. 67 ರನ್ ಗಳನ್ನು ಗಳಿಸಿ ನಿರ್ಗಮಿಸಿದರು. ವಿಜಯ್ ಶಂಕರ್ 29 ರನ್ ಗಳಿಸಿದರೆ, ಧೋನಿ ೨೮ ರನ್ ಗಳಿಸಿ ನಿರ್ಗಮಿಸಿದರು. ಕೇದರ್ ಜಾದರ್ 52 ರನ್ ಗಳಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಲು ನೆರವಾದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 224 ರನ್ ಗಳ ಅಲ್ಪ ಮೊತ್ತ ಪೇರಿಸಲಷ್ಟೇ ಶಕ್ತವಾಯಿತು.
ಕೋಹ್ಲಿ ಪಡೆ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಅಫ್ಘಾನ್ ಜವಾಬ್ದಾರಿಯ ಆಟವಾಡಲು ಆರಂಭಿಸಿತು. ಬಹುತೇಕ ಗೆಲುವಿನ ನಿರೀಕ್ಷೆಯನ್ನು ಕೂಡ ಹೊಂದಿತ್ತು. ನಯಿಬ್ 27 ರನ್ ಗಳಿಸಿದರೆ, ರಹಮತ್ ಶಾ 36 ರನ್ ಗಳಿಸಿದರು. ಅಫ್ಘಾನ್ ಪರ ಜವಾಬ್ದಾರಿಯ ಆಟವಾಡಿದ ಮಹಮ್ಮದ್ ನಬಿ ತಂಡವನ್ನು ಗೆಲುವಿನತ್ತ ಮುನ್ನುಗ್ಗಿಸಿದರು. ಅಂತಿಮ ಓವರ್ ನಲ್ಲಿ ಗೆಲುವು ಭಾರತದ ಕೈಯಿಂದ ಕಸಿದುಕೊಳ್ಳುವ ಎಲ್ಲಾ ಲಕ್ಷಣಗಳು ಅಫ್ಘಾನ್ ತಂಡ ಹೊಂದಿತ್ತು. ಆದರೆ, ಶಮಿ ಎಸೆದ 50ನೇ ಓವರ್ ನ 3 ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ 52 ರನ್ ಗಳಿಗೆ ತನ್ನ ಆಟ ಮುಗಿಸಿದರು. ಬಳಿಕ ಬಂದ ಅಫ್ತಾಬ್ ಅಲಾಮ್ ಮತ್ತು ಯುಆರ್ ರಹ್ ಮನ್ ಅವರನ್ನು ಬಂದಂತೆ ಫೇವಿಲಿಯನ್ ಗೆ ಅಟ್ಟಿದರು.
ಅಂತಿಮವಾಗಿ 1 ಎಸೆತ ಬಾಕಿ ಉಳಿದಿರುವಂತೆ ಅಫ್ಘಾನ್ ತಂಡವನ್ನು 213 ರನ್ ಗಳಿಗೆ ಕಟ್ಟಿ ಹಾಕಿ ಟೀಂ ಇಂಡಿಯಾ 12 ರನ್ ಗಳ ಅಂತರದ ಗೆಲುವು ತನ್ನದಾಗಿಸಿಕೊಂಡಿತು.
ಹ್ಯಾಟ್ರಿಕ್ ವಿಕೆಟ್ ಕಿತ್ತ ಶಮಿ:
ಟೀಂ ಇಂಡಿಯಾಕ್ಕೆ ಡೇಂಜರಸ್ ಆಗಿದ್ದ ನಬಿ ಅವರನ್ನು 50ನೇ ಓವರ್ ನ ೩ನೇ ಎಸೆತದಲ್ಲಿ ಔಟ್ ಮಾಡಿದರೆ, ಬಳಿಕ ಬಂದ ಅಫ್ತಾಬ್ ಅಲಾಮ್ ಮತ್ತು ಯುಆರ್ ರಹ್ ಮನ್ ಅವರನ್ನು ಬಂದ ಹಾದಿಯಲ್ಲೇ ಫೆವಿಲಿಯನ್ ಗೆ ಅಟ್ಟಿದರು. ನಾಲ್ಕನೇ ಎಸೆತದಲ್ಲಿ ಅಲಾಮ್ ಔಟಾದರೆ, 5ನೇ ಎಸೆತದಲ್ಲಿ ರಹ್ ಮನ್ ಫೆವಿಲಿಯನ್ ಸೇರಿದರು. ಆ ಮೂಲಕ ಹ್ಯಾಟ್ರಿಕ್ ವಿಕೆಟ್ ಕಿತ್ತು ಶಮಿ ಸಂಭ್ರಮಿಸಿದರು.