ನವದೆಹಲಿ, ಜು. 13 (DaijiworldNews/AA): ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.

ಸೈನಾ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. "ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಆಲೋಚನೆಯ ನಂತರ ನಾವಿಬ್ಬರು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದಾರೆ.
ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2018ರಲ್ಲಿ ಬ್ಯಾಡ್ಮಿಂಟನ್ ಆಟಗಾರನಾಗಿದ್ದ ಕಶ್ಯಪ್ ಅವರೊಂದಿಗೆ ಸೈನಾ ವಿವಾಹವಾಗಿದ್ದರು. ಇನ್ನು ತಾವಿಬ್ಬರು ಬೇರ್ಪಡುವ ನಿರ್ಧಾರವನ್ನು ಸೈನಾ ಅವರು ಬಹಿರಂಗವಾಗಿಯೇ ತಿಳಿಸಿದರೆ, ಕಶ್ಯಪ್ ಅವರು ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ನೆಹ್ವಾಲ್ ಒಲಿಂಪಿಕ್ಸ್ ಕಂಚಿನ ಪದಕ ಮತ್ತು ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರೆ ಪರುಪಳ್ಳಿ ಕಶ್ಯಪ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಗೆಳೆಯರಾಗಿದ್ದ ಇವರು 2018 ರಲ್ಲಿ ಹಸೆಮಣೆ ಏರಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದರೆ ಸೈನಾ ನೆಹ್ವಾಲ್ ಇನ್ನೂ ನಿವೃತ್ತಿ ಪಡೆದಿಲ್ಲ.