ಮುಂಬೈ, ಆ. 10 (DaijiworldNews/AA): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗಿ ಯಶ್ ದಯಾಳ್ ಅವರನ್ನು ಉತ್ತರ ಪ್ರದೇಶ ಟಿ20 ಲೀಗ್ನಿಂದ ನಿಷೇಧಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಯಶ್ ದಯಾಳ್ ಅವರನ್ನು ಯುಪಿಟಿ20 2025 ಲೀಗ್ನಿಂದ ಕೈ ಬಿಡಲಾಗಿದ್ದು, ಹೀಗಾಗಿ ಮುಂಬರುವ ಟೂರ್ನಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.

ಯಶ್ ದಯಾಳ್ ವಿರುದ್ಧ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 2 ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ ಆರೋಪವಿದೆ. ಈ ಪ್ರಕರಣ ಸಂಬಂಧ ಬಂಧನದ ಭೀತಿಯನ್ನು ಸಹ ಎದುರಿಸುತ್ತಿದ್ದಾರೆ. ಹೀಗಾಗಿ ಯುಪಿ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಮುಂಬರುವ ಉತ್ತರ ಪ್ರದೇಶ ಟಿ20 ಲೀಗ್ನಲ್ಲಿ ಕಣಕ್ಕಿಳಿಯದಂತೆ ಯಶ್ ದಯಾಳ್ಗೆ ಸೂಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಬಾರಿಯ ಉತ್ತರ ಪ್ರದೇಶ ಟಿ20 ಲೀಗ್ನಲ್ಲಿ ಯಶ್ ದಯಾಳ್ ಗೋರಖ್ಪುರ ಲಯನ್ಸ್ ತಂಡದ ಪರ ಆಟವಾಡಬೇಕಿತ್ತು. ಕಳೆದ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಆರ್ಸಿಬಿ ವೇಗಿಯನ್ನು ಗೋರಖ್ಪುರ್ ಲಯನ್ಸ್ ಫ್ರಾಂಚೈಸಿಯು 7 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆದರೀಗ ದಯಾಳ್ ಅವರನ್ನು ಕೈ ಬಿಡುವಂತೆ ಗೋರಖ್ಪುರ್ ಲಯನ್ಸ್ ಫ್ರಾಂಚೈಸಿಗೆ ಯುಪಿಸಿಎ ಹೇಳಿದೆ.
ಗಾಜಿಯಾಬಾದ್ನ ಯುವತಿಯೊಬ್ಬಳು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಮೇಲೆ ಯಶ್ ದಯಾಳ್ ವಿರುದ್ಧ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.
ಭಾವನಾತ್ಮಕವಾಗಿ ನನ್ನನ್ನ ಕಟ್ಟಿಹಾಕಿ, ಕ್ರಿಕೆಟ್ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವುದಾಗಿ, ಉತ್ತಮ ಭವಿಷ್ಯ ಕಲ್ಪಿಸುವುದಾಗಿ ಹೇಳಿದ್ದ ದಯಾಳ್ ಜೈಪುರದ ಸೀತಾಪುರ ಹೋಟೆಲ್ಗೆ ಕರೆದಿದ್ದ. ಅಲ್ಲಿ ಮೊದಲ ಬಾರಿಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣ ನಡೆದಾಗ ನನಗೆ 17 ವರ್ಷ ವಯಸ್ಸಾಗಿತ್ತು. ಅಲ್ಲಿಂದ 2 ವರ್ಷಗಳ ಕಾಲ ಪದೇ ಪದೇ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಳು.