ಡಾರ್ವಿನ್, ಆ. 11 (DaijiworldNews/AA): ಟಿ20 ಕ್ರಿಕೆಟ್ನಲ್ಲಿ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೊಂದಿಗೆ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅಂದರೆ ಟಿ20 ಕ್ರಿಕೆಟ್ ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಇದೀಗ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಅಗ್ರಸ್ಥಾನಕ್ಕೇರಿದ್ದಾರೆ.

ಡಾರ್ವಿನ್ನ ಮರ್ರಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಅಂತಿಮವಾಗಿ 52 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್ ೮ ಭರ್ಜರಿ ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 83 ರನ್ ಕಲೆಹಾಕಿದರು. ಈ ಸ್ಫೋಟಕ ಬ್ಯಾಟಿಂಗ್ ನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕನಿಷ್ಠ 1000 ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಈ ಭರ್ಜರಿ ವಿಶ್ವ ದಾಖಲೆ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು. ಟಿ20 ಕ್ರಿಕೆಟ್ ನಲ್ಲಿ ಕನಿಷ್ಠ ಸಾವಿರ ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ 167ರ ಸ್ಟ್ರೈಕ್ ರೇಟ್ ನೊಂದಿಗೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಟಿಮ್ ಡೇವಿಡ್ ಅಗ್ರಸ್ಥಾನಕ್ಕೇರಿದ್ದಾರೆ.
ಟಿಮ್ ಡೇವಿಡ್ ಅವರು 167.3 ಸ್ಟ್ರೈಕ್ ರೇಟ್ ನೊಂದಿಗೆ ಮೊದಲ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕನಿಷ್ಠ 1000 ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.