ಬೆಂಗಳೂರು, ಆ. 13 (DaijiworldNews/AA): ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.

ಸಮನ್ಸ್ ಜಾರಿಯಾದ ಹಿನ್ನೆಲೆ ಸುರೇಶ್ ರೈನಾ ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗಬೇಕಾಗುತ್ತದೆ. ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಸುರೇಶ್ ರೈನಾ ಅವರ ಈ ವಿಚಾರಣೆ ನಡೆಯಬೇಕಿದೆ. ಹೀಗಾಗಿ ರೈನಾ ಬುಧವಾರ ಏಜೆನ್ಸಿಯ ಮುಂದೆ ಹಾಜರಾಗುವ ಸಾಧ್ಯತೆಯಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್ಗಳು ಮತ್ತು ಪ್ಲಾಟ್ಫಾರ್ಮ್ಗಳ ಮೇಲಿನ ಕ್ರಮದ ಭಾಗವಾಗಿ ರೈನಾಗೆ ಈ ಸಮನ್ಸ್ ಜಾರಿ ಮಾಡಲಾಗಿದೆ.
ಆನ್ಲೈನ್ ವೇದಿಕೆಗಳು ಬಳಕೆದಾರರನ್ನು ವಂಚಿಸುವ ಮತ್ತು ಹಣ ಅಕ್ರಮವಾಗಿ ವರ್ಗಾವಣೆ ಮಾಡುವ ಬಗ್ಗೆ ವ್ಯಾಪಕ ತನಿಖೆಯ ಭಾಗವಾಗಿ ಇಡಿ ಅನೇಕ ನಗರಗಳಲ್ಲಿ ವಿವಿಧ ಪ್ರಕರಣಗಳನ್ನು ಅನುಸರಿಸುತ್ತಿದೆ. 1xBet ಹೆಸರಿನ ಅಪ್ಲಿಕೇಶನ್ಗೆ ಸಂಬಂಧಿಸಿದ ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಆಗಸ್ಟ್ 13 ರಂದು ಏಜೆನ್ಸಿಯ ಮುಂದೆ ಹಾಜರಾಗಲು ರೈನಾ ಅವರಿಗೆ ತಿಳಿಸಲಾಗಿದೆ.
ಅನೇಕ ಮಾಜಿ ಕ್ರಿಕೆಟಿಗರು ಬೆಟ್ಟಿಂಗ್ ಆ್ಯಪ್ಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಸಮನ್ಸ್ ನೀಡಲಾಗಿದೆ. ಮೇ ತಿಂಗಳಲ್ಲಿ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಸೇರಿದಂತೆ 25 ನಟರ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.