ಮ್ಯಾಂಚೆಸ್ಟರ್,ಜೂ27(DaijiworldNews/SS): ಹೊಸ ಬಣ್ಣದ ಜರ್ಸಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಜರ್ಸಿಯ ಬಣ್ಣದ ಬಗ್ಗೆ ನಮಗೆ ಯಾವುದೇ ಅರಿವಿಲ್ಲ. ಅದರ ಬಗ್ಗೆ ಯಾವುದೇ ಯೋಚನೆ ಕೂಡಾ ಇಲ್ಲ. ಆದರೆ, ನಾಳಿನ ಪಂದ್ಯದ ಬಗ್ಗೆ ಗಮನ ಹರಿಸಿದ್ದೇವೆ. ನಾವೆಲ್ಲ ಆಟದ ಕಡೆಗೆ ಗಮನ ಹರಿಸಿದ್ದೇವೆ ಎಂದು ಹೇಳಿದರು.
ಜೂನ್ 30 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿ ಬದಲಿಗೆ ಅರೆಂಜ್ ಬಣ್ಣದ ಜರ್ಸಿ ಧರಿಸುವ ಸಾಧ್ಯತೆ ಇದೆ. ಆರೆಂಜ್ ಬಣ್ಣದ ಜರ್ಸಿ ಧರಿಸುತ್ತಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಮೂಲಕ ಸರ್ಕಾರ ಎಲ್ಲವನ್ನೂ ಕೇಸರಿಮಯ ಮಾಡಲು ಹೊರಟಿದೆ ಎಂದು ಆರೋಪಿಸಿವೆ.
ಟೀಂ ಇಂಡಿಯಾ ಜರ್ಸಿಯನ್ನು ಕೇಸರೀಕರಣಗೊಳಿಸುವ ಬಿಸಿಸಿಐ ನಿರ್ಧಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಆರೋಪಿಸಿದ್ದಾರೆ.
ಜರ್ಸಿ ಬಣ್ಣದ ಆಯ್ಕೆ ಬಿಸಿಸಿಐಗೆ ನೀಡಲಾಗಿದ್ದು, ಅವರಿಗೆ ಇಷ್ಟಬಂದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಹೊಂದಿದ್ದಾರೆ ಎಂದು ಐಸಿಸಿ ಹೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.