ಮೈಸೂರು, ಆ. 29 (DaijiworldNews/AK):ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟಿ20 ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡವು, ಹುಬ್ಬಳ್ಳಿ ಟೈಗರ್ಸ್ ತಂಡವನ್ನು ವಿ ಜಯದೇವನ್ ನಿಯಮದಡಿಯಲ್ಲಿ 8 ವಿಕೆಟ್ಗಳಿಂದ ಮಣಿಸಿ ಮೊದಲ ಬಾರಿಗೆ ಮಹಾರಾಜ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡವು 8 ವಿಕೆಟ್ಗಳ ನಷ್ಟಕ್ಕೆ 154 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡ 10.4 ಓವರ್ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ಕಲೆಹಾಕಿತ್ತು. ಆದರೆ ಈ ವೇಳೆಗೆ ಮಳೆ ಧಾರಕಾರವಾಗಿ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಸಾಕಷ್ಟು ಸಮಯ ಕಾದ ಬಳಿಕವೂ ಮಳೆ ನಿಲ್ಲಲಿಲ್ಲ. ಹೀಗಾಗಿ ವಿ ಜಯದೇವನ್ ನಿಯಮದಡಿಯಲ್ಲಿ ಮಂಗಳೂರು ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ವಾಸ್ತವವಾಗಿ ಇದೇ ಮಂಗಳೂರು ಡ್ರಾಗನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮಂಗಳೂರು ತಂಡವನ್ನು ಮಣಿಸಿದ್ದ ಹುಬ್ಬಳ್ಳಿ ತಂಡ ನೇರವಾಗಿ ಫೈನಲ್ಗೇರಿತ್ತು. ಆ ಬಳಿಕ ನಡೆದಿದ್ದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದ್ದ ಮಂಗಳೂರು ತಂಡ ಮತ್ತೊಮ್ಮೆ ಫೈನಲ್ನಲ್ಲಿ ಹುಬ್ಬಳ್ಳಿ ತಂಡಕ್ಕೆ ಎದುರಾಳಿಯಾಗಿತ್ತು. ಒಂದೆಡೆ ಹುಬ್ಬಳ್ಳಿ ತಂಡಕ್ಕೆ ಹಿಂದಿನ ಗೆಲುವಿನ ಬಲ ಸಿಕ್ಕಿದ್ದರೆ, ಇತ್ತ ಮಂಗಳೂರು ತಂಡಕ್ಕೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿತ್ತು. ಅದರಂತೆ ಇಂದು ನಡೆದ ಫೈನಲ್ನಲ್ಲಿ ಹುಬ್ಬಳ್ಳಿ ತಂಡವನ್ನು ಮಣಿಸುವಲ್ಲಿ ಮಂಗಳೂರು ಯಶಸ್ವಿಯಾಯಿತು.