ನವದೆಹಲಿ, ಆ. 29 (DaijiworldNews/AA): ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಹಿನ್ನೆಲೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಶುಕ್ಲಾ ಮುಂದಿನ ಚುನಾವಣೆಯವರೆಗೂ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ, 70 ವಯಸ್ಸಿನ ನಂತರ ಯಾವುದೇ ಪದಾಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಇತ್ತೀಚಿಗೆ ಜು.19ರಂದು ರೋಜರ್ ಬಿನ್ನಿ ಅವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹೀಗಾಗಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಹೇಳಲಾಗಿದೆ.
2017ರ ಸುಪ್ರೀಂ ಕೋರ್ಟ್ನ ಶಿಫಾರಸುಗಳ ಪ್ರಕಾರ, ಬಿಸಿಸಿಐನಂತಹ ಕೆಲವು ಭಾರತೀಯ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಒಟ್ಟು ಒಂಬತ್ತು ವರ್ಷಗಳು ಅಥವಾ ಸತತ ಆರು ವರ್ಷಗಳನ್ನು ಪೂರೈಸಿದ ನಂತರ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಈ ನಿಯಮಗಳು ಹೊಸ ನಾಯಕತ್ವವನ್ನು ಉತ್ತೇಜಿಸುವ ಮತ್ತು ಅಧಿಕಾರದ ಕೇಂದ್ರೀಕರಣವನ್ನು ತಡೆಯುವ ಮೂಲ ಗುರಿಯನ್ನು ಹೊಂದಿದೆ.
ಬುಧವಾರ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯು ಶುಕ್ಲಾ ಅವರ ನೇತೃತ್ವದಲ್ಲಿ ನಡೆದಿತ್ತು. ಸಭೆಯಲ್ಲಿ ಡ್ರೀಮ್ 11 ಒಪ್ಪಂದವನ್ನು ಮುಕ್ತಾಯಗೊಳಿಸುವುದರ ಜೊತೆಗೆ ಮುಂದಿನ ಎರಡೂವರೆ ವರ್ಷಗಳ ಕಾಲ ಹೊಸ ಪ್ರಾಯೋಜಕರ ಹುಡುಕಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೂ ಸೆಪ್ಟೆಂಬರ್ 10ರಂದು ಏಷ್ಯಾ ಕಪ್ ಪ್ರಾರಂಭವಾಗುವುದರೊಳಗೆ ಹೊಸ ಪ್ರಾಯೋಜಕರನ್ನು ಬಿಸಿಸಿಐ ಕಂಡುಕೊಳ್ಳಬೇಕಾಗಿದೆ.