ಮ್ಯಾಂಚೆಸ್ಟರ್, ಜೂ 27 (Daijiworld News/SM): ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರೆದಿದೆ. ವೆಸ್ಟ್ ಇಂಡೀಸ್ ವಿರುದ್ಧ 124 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ದೊಡ್ಡ ಮೊತ್ತ ದಾಖಲಿಸುವ ಹುಮ್ಮಸ್ಸಿನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ವೆಸ್ಟ್ ಇಂಡೀಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿತು. ಅಂತಿಮವಾಗಿ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ಗಳನ್ನು ಮಾತ್ರವೇ ದಾಖಲಿಸಿಲು ಶಕ್ತವಾಯಿತು.
ಭಾರತದ ಪರ ರೋಹಿತ್ ಶರ್ಮಾ 18 ರನ್ ಗಳಿಸಿರುವಾಗ ವಿವಾದಾತ್ಮಕ ತೀರ್ಪೊಂದಕ್ಕೆ ಗುರಿಯಾಗಿ ನಿರಾಸೆ ಮೂಡಿಸಿದರು. ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ 48 ರನ್ಗಳನ್ನು ಪೇರಿಸಿದರು. ಇದರಿಂದಾಗಿ ಭಾರತಕ್ಕೆ ಉತ್ತಮ ಆರಂಭ ಸಿಗದೆ ಸಂಕಷ್ಟಕ್ಕೆ ಸಿಲುಕುವಂತಾಯಿತು.
ಬಳಿಕ ತಂಡಕ್ಕೆ ಜೀವ ಕಳೆ ತುಂಬಿದ ನಾಯಕ ವಿರಾಟ್, ಅದ್ಭುತ ಪ್ರದರ್ಶನ ತೋರಿದರು. 72 ರನ್ಗಳ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ಬಳಿಕ ತಾಳ್ಮೆಯ ಆಟವಾಡಿದ ಮಾಜಿ ನಾಯಕ ಎಂ.ಎಸ್ ಧೋನಿ, ಕೊನೆಯವರೆಗೂ ಕ್ರೀಸ್ನಲ್ಲಿ ಭದ್ರವಾಗಿ ನಿಂತು, 61 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳೊಂದಿಗೆ 56 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಈ ನಡುವೆ ಬಿರುಸಿನ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 38 ಎಸೆತಗಳಲ್ಲಿ 5 ಫೋರ್ಗಳನ್ನು ಒಳಗೊಂಡ 46 ರನ್ಗಳನ್ನು ಸಿಡಿಸಿದರು.
ಭಾರತ ನೀಡಿದ ಸಾದಾರಣ ಮೊತ್ತದ ಗುರಿ ಬೆನ್ನತ್ತಿದ ವಿಂಡೀಸ್ ಗೆ ನಿರೀಕ್ಷೆಯ ಪ್ರದರ್ಶ್ನ ನೀಡಲು ಟೀಂ ಇಂಡಿಯಾ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ. ಭಾರತದ ದಾಳಿಗೆ ತತ್ತರಿಸಿದ ವಿಂಡೀಸ್ ಪಡೆ ಅಂತಿಮವಾಗಿ 34.2 ಓವರ್ ಗಳಲ್ಲಿ 124 ರನ್ ಗಳನ್ನಷ್ಟೇ ಗಳಿಸಿ ಭಾರತಕ್ಕೆ ಶರಣಾಯಿತು. ವಿಂಡೀಸ್ ಪರ ಸುನಿಲ್ ಅಂಬ್ರಿಸ್ 31, ನಿಕೋಲಸ್ 28 ರನ್ ಗಳನ್ನು ಸಿಡಿಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಆಟಗಾರ ಕೂಡ ನಿರೀಕ್ಷೆಯ ಪ್ರದರ್ಶನ ನೀಡಲು ವಿಫಲರಾದರು. ಟೀಂ ಇಂಡಿಯಾ ದಾಳಿಯ ಮುಂದೆ ವೆಸ್ಟ್ ಇಂಡೀಸ್ ಆಟಗಾರರು ಬಂದಂತೆ ಫೆವೀಲಿಯನ್ ಹಾದಿ ಹಿಡಿದರು.
ಭಾರತ ಪರ ಮಹಮ್ಮದ್ ಶಮಿ 6.2 ಓವರ್ ಗಳಲ್ಲಿ 16 ರನ್ ಗಳನ್ನು ನೀಡಿ 4 ವಿಕೆಟ್ ಕಬಳಿಸುವ ಮೂಲಕ ಮತ್ತೊಮ್ಮೆ ಮಿಂಚಿದರು. ಬೂಮ್ರಾ ಮತ್ತು ಚಾಹಲ್ ತಲಾ 2 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ ಹಾಗೂ ಯಾದವ್ ತಲಾ 1 ವಿಕೆಟ್ ಗಳನ್ನು ಕಿತ್ತು ಸಂಭ್ರಮಿಸಿದರು.