ಮುಂಬೈ, ಸೆ. 13 (DaijiworldNews/AK):ಕಾಮನ್ವೆಲ್ತ್ ಮತ್ತು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ತನ್ನ ಮಗುವಿಗೆ ಹಾಲುಣಿಸಿದ ನಂತರ, ಉಳಿದ ಎದೆ ಹಾಲನ್ನು ಗುಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ದಾನ ಮಾಡುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ, ಅವರು ಪ್ರತಿದಿನ ಸರ್ಕಾರಿ ಆಸ್ಪತ್ರೆಗಳಿಗೆ 600 ಮಿಲಿಲೀಟರ್ ಅಂದರೆ ನಾಲ್ಕು ತಿಂಗಳಲ್ಲಿ 30 ಲೀಟರ್ ಹಾಲು ಎದೆಹಾಲು ದಾನ ಮಾಡಿದ್ದು, ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಮೂಲಕ ಜ್ವಾಲಾ ಗುಟ್ಟಾ ಅವರು ತಾಯಂದಿರಿಂದ ಹಾಲು ಪಡೆಯಲು ಸಾಧ್ಯವಾಗದ ಅಸಹಾಯಕ ಶಿಶುಗಳಿಗೆ ತಾಯಿಯಾಗಿದ್ದಾರೆ. ಅವರ ಆಪ್ತ ವೈದ್ಯೆ ಮಂಜುಳಾ ಅಂಗಾನಿ ಈ ನಿರ್ಧಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಗುಟ್ಟಾ ಹೇಳಿದ್ದಾರೆ.
ಆಟಗಾರ್ತಿಯಾಗಿ ಜ್ವಾಲಾ ಗುಟ್ಟಾ 2010 ಮತ್ತು 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಲ್ಲದೇ ತಮ್ಮ ಜೋಡಿ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಅನೇಕ ಐತಿಹಾಸಿಕ ಪಂದ್ಯಗಳನ್ನು ಗೆದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ಡಬಲ್ಸ್ನಲ್ಲಿ ಭಾರತವನ್ನು ವಿಶ್ವ ಸ್ಥಾನಮಾನಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇದರ ಹೊರತಾಗಿ, 2011 ರಲ್ಲಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದು, 2014 ರಲ್ಲಿ ಥಾಮಸ್ ಮತ್ತು ಉಬರ್ ಕಪ್ಗಳಲ್ಲಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.