ದುಬೈ, ಸೆ. 14 (DaijiworldNews/TA): 2025ರ ಏಷ್ಯಾ ಕಪ್ ಟೂರ್ನಮೆಂಟ್ನಲ್ಲಿ, ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಪಂದ್ಯ ಇಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರಿನ ನಂತರ ಉಭಯ ರಾಷ್ಟ್ರಗಳು ಮತ್ತೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿರುವುದು ಇದಾಗಿದ್ದು, ಕ್ರಿಕೆಟ್ ಕಣವನ್ನು ಮೀರಿದ ಭಾವನಾತ್ಮಕ ಹಿನ್ನೆಲೆ ಈ ಪಂದ್ಯಕ್ಕೆ ಸೇರಿದೆ. ರಾಜಕೀಯ, ರಾಜತಾಂತ್ರಿಕ ಉದ್ವಿಗ್ನತೆಗಳ ನಡುವೆ ನಡೆಯುತ್ತಿರುವ ಈ ಪಂದ್ಯ ಅಭಿಮಾನಿಗಳಿಗೂ, ಆಟಗಾರರಿಗೂ ಅಪಾರ ಮಹತ್ವ ಹೊಂದಿದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಟೂರ್ನಮೆಂಟ್ನಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಗೆಲುವಿನಿಂದ ಆರಂಭಿಸಿವೆ. ಭಾರತವು ಯುಎಇ ವಿರುದ್ಧ ಆಧಿಪತ್ಯ ಪ್ರದರ್ಶಿಸಿ 57 ರನ್ಗಳಿಗೆ ವಿರೋಧಿ ತಂಡವನ್ನು ಆಲೌಟ್ ಮಾಡುವ ಮೂಲಕ ಭರ್ಜರಿ ಜಯ ಸಾಧಿಸಿತು. ಪಾಕಿಸ್ತಾನ ತಂಡದ ಬ್ಯಾಟ್ಸ್ಮನ್ಗಳು ಓಮನ್ ವಿರುದ್ಧ ತಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ತೋರಿಸಲಿಲ್ಲದರೂ, ಸ್ಪಿನ್ನರ್ಗಳ ಶ್ರೇಷ್ಠ ಪ್ರದರ್ಶನದ ಹಿನ್ನೆಲೆಯಲ್ಲಿ ಗೆಲುವು ದಾಖಲಿಸಲು ಯಶಸ್ವಿಯಾಯಿತು.
ಈ ನಡುವೆ, ಪಾಕಿಸ್ತಾನ ತಂಡದಲ್ಲಿ ಹಲವು ಹೊಸ ಮುಖಗಳು ಇದ್ದು, ಇವರಿಗೆ ಭಾರತವಿರುದ್ದ ಮೊದಲ ಬಾರಿಗೆ ಆಡುವ ಅವಕಾಶ ಸಿಕ್ಕಿದೆ. ಈ ಪಂದ್ಯ ಹಲವು ಯುವ ಆಟಗಾರರಿಗೊಂದು ನಿರ್ಣಾಯಕ ಕ್ಷಣವಾಗಲಿದೆ. ಆರಂಭಿಕ ಆಟಗಾರನಾಗಿ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಯಾಮ್ ಅಯೂಬ್, ತಮ್ಮ ಅರೆಕಾಲಿಕ ಸ್ಪಿನ್ ಸಾಮರ್ಥ್ಯವನ್ನೂ ಹೊಂದಿದ್ದು, ಮೊದಲ ಬಾರಿಗೆ ಭಾರತವಿರುದ್ಧ ಕಣಕ್ಕಿಳಿಯಲಿದ್ದಾರೆ. ಅವರಿಗೆ ಜೊತೆಯಾಗಿ ಸಹ ಆಟಗಾರರಾದ ಸಾಹಿಬ್ಜಾದಾ ಫರ್ಹಾನ್ ಸಹ ಭಾರತ ವಿರುದ್ಧ ಈಗ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಅವರು 2018ರಲ್ಲಿ ಪಾಕಿಸ್ತಾನ ತಂಡದ ಭಾಗವಾದರೂ, 2024ರ ಬಳಿಕ ಪುನಃ ತಂಡ ಸೇರಿದ್ದಾರೆ.
ಮೊಹಮ್ಮದ್ ಹ್ಯಾರಿಸ್, ಪಾಕಿಸ್ತಾನದ ಆಕ್ರಮಣಕಾರಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿದ್ದು, ಈಗಾಗಲೇ 29 ಟಿ20ಐ ಮತ್ತು 6 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಪರ ಆಡಿದ್ದಾರೆ. ಆದರೆ ಅವರು ಭಾರತವಿರುದ್ಧ ಇದೇ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಇದೇ ರೀತಿ, ಹಸನ್ ನವಾಜ್ ಎಂಬ ಇನ್ನೊಬ್ಬ ಶಕ್ತಿ ಶಾಲಿ ಬ್ಯಾಟ್ಸ್ಮನ್ ಕೂಡ ಭಾರತದ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದ್ದಾನೆ. ಆತ ತನ್ನ ಕೇವಲ ಕೆಲವು ಪಂದ್ಯಗಳ ವೃತ್ತಿಜೀವನದಲ್ಲೇ ಗಮನ ಸೆಳೆದಿದ್ದಾನೆ.
ಸ್ಪಿನ್ ವಿಭಾಗದಲ್ಲಿ ಸುಫಿಯಾನ್ ಮುಕೀಮ್ ಎಂಬ ಎಡಗೈ ಸ್ಪಿನ್ನರ್ ಗಮನ ಸೆಳೆಯುತ್ತಿದ್ದಾರೆ. ಅವರು ಅಬ್ರಾರ್ ಅಹ್ಮದ್ ಜೊತೆಗೆ ಪಾಕಿಸ್ತಾನದ ಸ್ಪಿನ್ ದಾಳಿಗೆ ನವ ಶಕ್ತಿ ನೀಡುತ್ತಿದ್ದಾರೆ. ಅವರಿಗೂ ಈ ಪಂದ್ಯವೇ ಭಾರತ ವಿರುದ್ಧ ಮೊದಲ ಪಾದಾರ್ಪಣೆ. ಇದೇ ರೀತಿಯಲ್ಲಿ, ಆಲ್ರೌಂಡರ್ ಹುಸೇನ್ ತಲಾತ್ ಈಗಾಗಲೇ ಹಲವು ಪಂದ್ಯಗಳಲ್ಲಿ ಭಾಗಿಯಾದರೂ, ಭಾರತ ವಿರುದ್ಧ ಇದೇ ಮೊದಲ ಪಂದ್ಯವಿದು.
ವೇಗದ ಬೌಲರ್ ಮೊಹಮ್ಮದ್ ವಾಸಿಮ್ ಜೂನಿಯರ್, ಒಂದು ವರ್ಷದ ನಂತರ ತಮ್ಮ ಮೊದಲ ಟಿ20ಐ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಭಾರತವಿರುದ್ಧ ಅವರು ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ತಂಡದ ಭಾಗವಾದ ಎಡಗೈ ವೇಗದ ಬೌಲರ್ ಸಲ್ಮಾನ್ ಮಿರ್ಜಾ ಸಹ ಐದು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದರೂ, ಭಾರತ ವಿರುದ್ಧ ಇದೇ ಮೊದಲ ಅವಕಾಶ.