ಚೆಸ್ಟರ್ ಲೆ ಸ್ಟ್ರೀಟ್, ಜೂ 29 (Daijiworld News/SM): ಸತತ ಸೋಲಿನ ಸುಳಿಯಲ್ಲಿ ಸಿಲುಕಿ ಕಂಗೆಟ್ಟಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಮತ್ತೊಂದು ಪಂದ್ಯವನ್ನು ಗೆದ್ದುಕೊಂಡಿದೆ. ಶ್ರೀಲಂಕಾ ವಿರುದ್ಧ ಭರ್ಜರಿ 9 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ.
ಆ ಮೂಲಕ ಸೆಮಿಫೈನಲ್ಸ್ ಗೆ ಎಂಟ್ರಿ ನೀಡುವ ಲೆಕ್ಕಾಚಾರದಲ್ಲಿರುವ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದೆ. ದಕ್ಷಿಣ ಆಫ್ರಿಕಾ ಎದುರು 9 ವಿಕೆಟ್ಗಳ ಹೀನಾಯ ಸೋಲುಂಡು ಟೂನರ್ನಿಯಲ್ಲಿ ತನ್ನ ಮುಂದಿನ ಹಾದಿಯನ್ನು ಮತ್ತಷ್ಟು ದುರ್ಗಮವಾಗಿಸಿಕೊಂಡಿದೆ.
ರಿವರ್ಸೈಡ್ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ತಂಡ 49.3 ಓವರ್ಗಳಲ್ಲಿ 203 ರನ್ಗಳಿಗೆ ಸರ್ವ ಪತನ ಕಂಡಿತು. ಪ್ರಮುಖ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪೇರಿಸಲು ಸಾಧ್ಯವಾಗಲಿಲ್ಲ.
ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಕೊನೆಗೂ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ 37.2 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 206 ರನ್ ಗಳನ್ನು ಸಿಡಿಸಿ ಭರ್ಜರಿ ಗೆಲುವು ದಾಖಲಿಸಿತು. ಇನ್ನು ಈಗಾಗಲೇ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಕಳೆದುಕೊಂಡಿರುವ ದ.ಆಫ್ರಿಕಾ ತಂಡ ಟೂರ್ನಿಯಿಂದ ಹೊರ ನಡೆದಿದೆ. ಇದೀಗ ಎರಡನೇ ಪಂದ್ಯ ಗೆದ್ದರೂ ಉಪಯೋಗವಿಲ್ಲದಂತಾಗಿದೆ.
ದ. ಆಫ್ರಿಕಾ ಪರ ಹಶೀಮ್ ಆಮ್ಲಾ (105 ಎಸೆತಗಳಲ್ಲಿ 80 ರನ್) ಮತ್ತು ನಾಯಕ ಫಾಫ್ ಡು'ಪ್ಲೆಸಿಸ್ (103 ಎಸೆತಗಳಲ್ಲಿ 96 ರನ್) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.