ಬೆಂಗಳೂರು, ಜೂ 29 (Daijiworld News/MSP): ಭಾರತೀಯ ಕ್ರಿಕೆಟಿಗರು ಈ ವಿಶ್ವಕಪ್ ಹೆಚ್ಚುವರಿ ಕಿತ್ತಳೆ ಬಣ್ಣದ ಜೆರ್ಸಿ ಧರಿಸಿ ಆಡುತ್ತಾರೆ ಅಥವಾ ಇಲ್ಲವೇ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಸಿಸಿಐ ಪೋಷಾಕುಗಳ ಪ್ರಾಯೋಜಕತ್ವ ಹೊಂದಿರುವ ನೈಕ್ ತಯಾರಿಸಿದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು ಎಲ್ಲರ ಕುತೂಹಲ ತಣಿಸಿದೆ.
ಭಾನುವಾರ ಬರ್ಮಿಂಗ್ ಹ್ಯಾಮ್ ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ದದ ಪಂದ್ಯದ ವೇಳೆ ಭಾರತದ ಆಟಗಾರರು ಈ ಜೆರ್ಸಿಯನ್ನು ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ತಿಳಿಸಿದೆ.
ನೂತನ ಜೆರ್ಸಿಯ ಮುಂಭಾಗ ಮತ್ತು ಕುತ್ತಿಗೆಯ ಭಾಗ ಗಾಢ ನೀಲಿ ಬಣ್ಣ ಹಾಗೂ ಉಳಿದಂತೆ ಕಿತ್ತಳೆ ಬಣ್ಣದಿಂದ ಕೂಡಿದೆ. ಯುವಜನರ ಉತ್ಸಾಹದ ಪ್ರತೀಕವಾಗಿರುವ ಈ ಜೆರ್ಸಿ ತಂಡದ ಆಟಗಾರರಲ್ಲಿ ಧೈರ್ಯ ಮತ್ತು ಸಾಹಸ ಮನೋಭಾವ ತುಂಬಲಿದೆ ಎಂಬ ವಿಶ್ವಾಸವಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 30ರಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಎಂದಿನಂತೆ ತನ್ನ ನೀಲಿ ವರ್ಣದ ಜೆರ್ಸಿಯಲ್ಲಿ ಪಂದ್ಯ ಆಡಲಿದೆ. ಭಾರತ ತಂಡದ ಪೋಷಾಕು ಕೂಡ ಗಾಢನೀಲಿ ಬಣ್ಣದಾಗಿದೆ. ಆದರೆ, ನಿಯಮದ ಪ್ರಕಾರ ಎರಡೂ ತಂಡಗಳು ಒಂದೇ ವರ್ಣದ ಪೋಷಾಕನ್ನು ಧರಿಸಿ ಆಡುವಂತಿಲ್ಲ. ಆದ್ದರಿಂದ ಭಾರತವು ವಿಭಿನ್ನ ಬಣ್ಣದ ಪೋಷಾಕು ಧರಿಸಬೇಕಾಗಿದೆ. ಕಿತ್ತಳೆ ವರ್ಣದ ಜೆರ್ಸಿ ಧರಿಸಲಿದೆ.