ಮುಂಬೈ, ಅ. 08 (DaijiworldNews/AK): 2025ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲದೇ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದು ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಐಸಿಸಿ ಟ್ರೋಫಿ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅತ್ತ ಗೌತಮ್ ಗಂಭೀರ್ ಅವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಟ್ರೋಫಿ ಗೆದ್ದರೂ, ಈ ಯಶಸ್ಸಿಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ಕಾರಣ ಎಂದಿದ್ದಾರೆ ರೋಹಿತ್ ಶರ್ಮಾ.
ಮುಂಬೈನಲ್ಲಿ ನಡೆದ ಸಿಯೆಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಚಾಂಪಿಯನ್ಸ್ ಟ್ರೋಫಿ ತಂಡದ ಮೇಲೆ ನನಗೆ ಅಭಿಮಾನವಿತ್ತು. ಅವರೊಂದಿಗೆ ಆಡುವುದನ್ನು ಇಷ್ಟಪಡುತ್ತಿದ್ದೆ. ನಾವೆಲ್ಲರೂ ಹಲವು ವರ್ಷಗಳಿಂದ ಭಾಗವಹಿಸಿದ್ದ ಪ್ರಯಾಣವಿದು. ಇದು ಒಂದು ಅಥವಾ ಎರಡು ವರ್ಷಗಳ ಕೆಲಸವಾಗಿರಲಿಲ್ಲ. ಟ್ರೋಫಿ ಗೆಲ್ಲಲು ನಾವು ವರ್ಷಗಳ ಕಾಲ ಯೋಜನೆ ರೂಪಿಸಿದ್ದೆವು ಎಂದಿದ್ದಾರೆ.