ಮುಂಬೈ, ಅ. 22 (DaijiworldNews/AK): ಮಹಿಳಾ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ್ ತಂಡ ಹೊರಬಿದ್ದಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಪಾಕ್ ಪಡೆ ಸೋಲುಂಡಿದೆ. ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಅದರಂತೆ ಕೇವಲ 2 ಅಂಕಗಳನ್ನು ಮಾತ್ರ ಪಡೆದಿರುವ ಪಾಕಿಸ್ತಾನ್ ತಂಡ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.

ಪಾಕ್ ತಂಡವು ಸೆಮಿಫೈನಲ್ ರೇಸ್ನಿಂದ ಹೊರಬೀಳುತ್ತಿದ್ದಂತೆ ಈ ಬಾರಿಯ ಏಕದಿನ ವಿಶ್ವಕಪ್ನ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುವುದು ಖಚಿತವಾಗಿದೆ. ಇದಕ್ಕೂ ಮುನ್ನ ಈ ಪಂದ್ಯಗಳನ್ನು ಕೊಲಂಬೊದಲ್ಲಿ ಆಯೋಜಿಸಲು ಯೋಜಿಸಿದೆ.
ಏಕದಿನ ವಿಶ್ವಕಪ್ಗೂ ಮುನ್ನ ಭಾರತದಲ್ಲಿ ಪಂದ್ಯವಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರಾಕರಿಸಿತ್ತು. ಅದರಂತೆ ಪಾಕಿಸ್ತಾನ್ ತಂಡದ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿತ್ತು. ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಅದರಂತೆ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೆ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದೆ.
ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದರೆ, ಮೊದಲ ಸೆಮಿಫೈನಲ್ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲದೆ ಪಾಕ್ ತಂಡ ಫೈನಲ್ಗೆ ತಲುಪಿದ್ದರೆ, ಅಂತಿಮ ಪಂದ್ಯವನ್ನೂ ಸಹ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಬೇಕಿತ್ತು. ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಮೊದಲ ಸೆಮಿಫೈನಲ್ಗೆ ಸ್ಥಳ ಇನ್ನೂ ಸಹ ನಿಗದಿ ಮಾಡಲಾಗಿಲ್ಲ.
ಬಿಸಿಸಿಐ ಇನ್ನಷ್ಟೇ ಮೊದಲ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಸ್ಟೇಡಿಯಂ ನಿಗದಿ ಮಾಡಲಿದೆ. ಅದರಂತೆ ಅಹಮದಾಬಾದ್ ಅಥವಾ ಕೊಲ್ಕತ್ತಾ ಅಥವಾ ಮುಂಬೈನಲ್ಲಿ ಅಂತಿಮ ಹಣಾಹಣಿ ನಡೆಯಬಹುದು.