ನವದೆಹಲಿ, ಅ. 22 (DaijiworldNews/ TA): ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳಿಗಾಗಿ, ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಚಿಹ್ನೆಯನ್ನು ಪ್ರದಾನ ಮಾಡಿದರು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಪಡೆಯ ಹಲವಾರು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಕಳೆದ ಒಂಭತ್ತು ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದಾರೆ. ಆಗಸ್ಟ್ 26, 2016 ರಂದು ನೈಬ್ ಸುಬೇದಾರ್ ಆಗಿ ಭಾರತೀಯ ಸೇನೆಯನ್ನು ಸೇರಿದ್ದ ನಿರಾಜ್ ಚೋಪ್ರಾಗೆ 2021 ರಲ್ಲಿ ಸುಬೇದಾರ್ , 2022 ರಲ್ಲಿ ಸುಬೇದಾರ್ ಮೇಜರ್ ಆಗಿ ಬಡ್ತಿ ಪಡೆದಿದ್ದರು.
ಸಮಾರಂಭದಲ್ಲಿ ನೀರಜ್ ಅವರ ತಂದೆ ಸತೀಶ್ ಚೋಪ್ರಾ, ತಾಯಿ ಸರೋಜ್ ದೇವಿ, ಪತ್ನಿ ಹಿಮಾನಿ ಮತ್ತು ಚಿಕ್ಕಪ್ಪ ಭೀಮ್ ಚೋಪ್ರಾ ಉಪಸ್ಥಿತರಿದ್ದರು. ನೀರಜ್ ಚೋಪ್ರಾ ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು. ಆದಾಗ್ಯೂ, ಪಂದ್ಯಾವಳಿಯಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಜಾವೆಲಿನ್ ಥ್ರೋ ಫೈನಲ್ನಲ್ಲಿ ಅವರು ಕೇವಲ 84.03 ಮೀಟರ್ ದೂರ ಜಾವೆಲಿನ್ ಎಸೆದು, ಅಗ್ರ ಆರರಲ್ಲಿ ಸ್ಥಾನ ಪಡೆಯುವಲ್ಲಿಯೂ ವಿಫಲರಾದರು. ಹೀಗಾಗಿ ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು.
ಡಿಸೆಂಬರ್ 24, 1997 ರಂದು ಹರಿಯಾಣದ ಪಾಣಿಪತ್ನ ಖಂದ್ರಾ ಗ್ರಾಮದಲ್ಲಿ ಜನಿಸಿದ ನೀರಜ್ ಚೋಪ್ರಾ, 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ನೀರಜ್ ಚೋಪ್ರಾ ಅವರ ಅಥ್ಲೆಟಿಕ್ಸ್ ಸಾಧನೆಗಳಿಗಾಗಿ ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.