ಅಡಿಲೇಡ್, ಅ. 23 (DaijiworldNews/ TA): ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ನಂತರ, ಟೀಮ್ ಇಂಡಿಯಾ ಬ್ಯಾಟಿಂಗ್ ಪ್ರಾರಂಭಿಸಿತು.

ರೋಹಿತ್ ಶರ್ಮಾ ತಮ್ಮ ಶೈಲಿಗೆ ತಕ್ಕಂತೆ ಪ್ರಬಲ ಪ್ರದರ್ಶನ ನೀಡಿದರು. ಅವರು 97 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಈ ಇನಿಂಗ್ಸ್ನೊಂದಿಗೆ ರೋಹಿತ್ ಶರ್ಮಾ ಒಂದು ಐತಿಹಾಸಿಕ ಸಾಧನೆ ಸಾಧಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಗೌರವವನ್ನು ಗಳಿಸಿದ್ದಾರೆ.
ಇದಕ್ಕೂ ಮುನ್ನ ಯಾವುದೇ ಭಾರತೀಯ ಬ್ಯಾಟರ್ ಆಸ್ಟ್ರೇಲಿಯಾ ಪಿಚ್ನಲ್ಲಿ 1000 ಏಕದಿನ ರನ್ ಗಳಿಸಿರಲಿಲ್ಲ. ಆದರೆ ಈ ಪಂದ್ಯದಲ್ಲಿ 73 ರನ್ಗಳನ್ನು ಸೇರಿಸಿದ ಬಳಿಕ ರೋಹಿತ್ ಶರ್ಮಾ ತಮ್ಮ ಏಕದಿನ ರನ್ಗಳ ಸಂಖ್ಯೆಯನ್ನು 1033 ರನ್ಗಳಿಗೆ ಏರಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ 21 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಈಗಾಗಲೇ 4 ಶತಕ ಹಾಗೂ 3 ಅರ್ಧಶತಕ ಗಳಿಸಿದ್ದು, ಅವರ ಬ್ಯಾಟ್ನಿಂದ 83 ಫೋರ್ ಹಾಗೂ 31 ಸಿಕ್ಸರ್ಗಳು ಮೂಡಿಬಂದಿವೆ. ಈ ಪ್ರದರ್ಶನವು ಆಸ್ಟ್ರೇಲಿಯಾ ಪಿಚ್ಗಳ ಮೇಲಿನ ಅವರ ಪ್ರಾಬಲ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ.
ಟೀಮ್ ಇಂಡಿಯಾ ಪರ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಈಗ ಮೊದಲ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈವರೆಗೆ ಆಸ್ಟ್ರೇಲಿಯಾದಲ್ಲಿ 20 ಏಕದಿನ ಪಂದ್ಯಗಳನ್ನಾಡಿ 3 ಶತಕ ಮತ್ತು 4 ಅರ್ಧಶತಕಗಳೊಂದಿಗೆ 802 ರನ್ ಕಲೆಹಾಕಿದ್ದಾರೆ.