ಭೋಪಾಲ್, ಅ. 25 (DaijiworldNews/AA): ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾಗವಹಿಸಲು ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.

ಆರೋಪಿಯನ್ನು ಅಕಿಲ್ ಖಾನ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೂ ಕೆಲವು ಕ್ರಿಮಿನಲ್ ಕೇಸ್ಗಳು ದಾಖಲಾಗಿದ್ದವು ಎನ್ನಲಾಗಿದೆ.
ಅ.23ರ ಬೆಳಿಗ್ಗೆ ರಾಡಿಸನ್ ಬ್ಲೂ ಹೋಟೆಲ್ನಿಂದ ಕೆಫೆಯೊಂದಕ್ಕೆ ತಂಡ ಹೋಗುತ್ತಿದ್ದಾಗ ಖಜ್ರಾನಾ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮೋಟಾರ್ ಸೈಕಲ್ನಲ್ಲಿ ಬಂದ ವ್ಯಕ್ತಿಯೊಬ್ಬ ಇಬ್ಬರು ಕ್ರಿಕೆಟಿಗರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರು ತಮ್ಮ ಹೋಟೆಲ್ನಿಂದ ಹೊರಬಂದು ಕೆಫೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಸೈಕಲ್ನಲ್ಲಿ ಬಂದ ವ್ಯಕ್ತಿ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದ. ಬಳಿಕ ಇಬ್ಬರ ಪೈಕಿ ಒಬ್ಬರಿಗೆ ಅನುಚಿತವಾಗಿ ಮುಟ್ಟಿ ಪರಾರಿಯಾಗಿದ್ದಾನೆ. ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಯ ಮೋಟಾರ್ ಸೈಕಲ್ನ ಸಂಖ್ಯೆಯನ್ನು ಗಮನಿಸಿದ್ದು, ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಸಬ್ಇನ್ಸ್ಪೆಕ್ಟರ್ ನಿಧಿ ರಘುವಂಶಿ ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಆಟಗಾರರಿಬ್ಬರು ತಮ್ಮ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರನ್ನು ಸಂಪರ್ಕಿಸಿದರು. ನಂತರ ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಮಾಹಿತಿ ತಿಳಿದ ಸಹಾಯಕ ಪೊಲೀಸ್ ಆಯುಕ್ತರು ಆಟಗಾರರನ್ನು ಭೇಟಿಯಾಗಿ, ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.