ಬರ್ಮಿಂಗ್ಹ್ಯಾಮ್, ಜು 02 (Daijiworld News/SM): ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾಕ್ಕೆ ಪ್ರಯಾಸದ ಗೆಲುವು ಲಭಿಸಿದೆ. 48 ಓವರ್ ಗಳಲ್ಲಿ 286 ರನ್ ಗಳಿಸಿ ಬಾಂಗ್ಲಾ ತಂಡವನ್ನು ಆಲ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾ 28 ರನ್ ಗಳ ಗೆಲುವನ್ನು ದಾಖಲಿಸಿಕೊಂಡಿದೆ.
ಟೀಂ ಇಂಡಿಯಾ ನೀಡಿದ 315 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು. ಬಳಿಕ ತಾಳ್ಮೆಯ ಆಟವಾಡಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದರು. ಅಂತಿಮವಾಗಿ ಬಾಂಗ್ಲಾ ತಂಡ ಗೆಲ್ಲುವ ಆಸೆಯನ್ನು ಜೀವಂತಗೊಳಿಸಿತ್ತು. ಆದರೆ, ೪೮ ಓವರ್ ನಲ್ಲಿ ಬಾಂಗ್ಲಾ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿನ ನಗೆ ಚೆಲ್ಲಿತು.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ, ಉಪ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಅಮೋಘ ಶತಕ ಸಿಡಿಸಿ ರೋಹಿತ್ ಮಿಂಚಿದ್ದು, ಟೀಂ ಇಂಡಿಯಾ 314 ರನ್ ಗಳನ್ನು ಪೇರಿಸಿದೆ.
ರೋಹಿತ್ ಗೆ ಕೆ.ಎಲ್.ರಾಹುಲ್ ಸಾಥ್ ನೀಡಿದ್ದು, ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆರಂಭಿಕ ಉತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಸುಸ್ಥಿಗೆ ತಲುಪಲು ಸಾಧ್ಯವಾಗಿದೆ. ಬಾಂಗ್ಲಾದೇಶಕ್ಕೆ ಗೆಲ್ಲಲು 315 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಅವರ ಭರ್ಜರಿ ಪ್ರದರ್ಶನದಿಂದ ಮೊದಲ ವಿಕೆಟ್ಗೆ 180 ರನ್ ಸೇರಿಸಿದರು. ಈ ಜೋಡಿ ಬಾಂಗ್ಲಾ ಬೌಲಿಂಗ್ನ್ನು ಸಮರ್ಥವಾಗಿ ಎದುರಿಸಿತು.
ಈ ಮಧ್ಯೆ ರೋಹಿತ್ ಶರ್ಮಾ ಈ ವಿಶ್ವಕಪ್ನಲ್ಲಿ ದಾಖಲೆಯ 4ನೇ ಶತಕ ಸಿಡಿ ಮಿಂಚಿದರು. 92 ಎಸೆತಗಳನ್ನು ಎದುರಿಸಿದ ರೋಹಿತ್ 104 ರನ್ ಬಾರಿಸಿದರು. ಸೌಮ್ಯ ಸರ್ಕಾರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಫೆವೀಲಿಯನ್ ಸೇರಿದರು.
ಇನ್ನು ಮತ್ತೊಂದೆಡೆ ಸಮಯೋಚಿತ ಬ್ಯಾಟಿಂಗ್ ನಡೆಸಿದ ರಾಹುಲ್ 77 ರನ್ ಗಳಿಸಿ ಶತಕದ ಹಾದಿಯಲ್ಲಿ ಎಡವಿದರು. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ 26 ಹಾಗೂ ರಿಷಭ್ ಪಂತ್ 48 ರನ್ ಗಳಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು