ಹೊಸದಿಲ್ಲಿ, ಜು09(Daijiworld News/SS): ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಟೀಂ ಇಂಡಿಯಾದ ಮಾಜಿ ನಾಯಕ, ಜ್ಯೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಮಹತ್ವದ ಘೋಷಣೆ ಮಾಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಹುಲ್ ಅವರಿಗೆ ಈ ಜವಾಬ್ದಾರಿ ನೀಡಿದ್ದು, ಬೆಂಗಳೂರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಎರಡು ವರ್ಷಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಯುವ ಕ್ರಿಕೆಟರ್'ಗಳ ಭವಿಷ್ಯ ರೂಪಿಸುವ ಹೊಣೆ ಹೊತ್ತಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟರ್ಸ್ ಬಗ್ಗೆ ಕೂಡಾ ಕಾಳಜಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ದ್ರಾವಿಡ್ ಗಾಯಗೊಂಡ ಕ್ರಿಕೆಟಿಗರ ಪುನಃಶ್ಚೇತನ ಶಿಬಿರಗಳ ಉಸ್ತುವಾರಿಯನ್ನು ಕೂಡ ವಹಿಸಿಕೊಳ್ಳಲಿದ್ದಾರೆ. ಹೊಸ ಹುದ್ದೆ ವಹಿಸಿಕೊಡ ಬಳಿಕ ದ್ರಾವಿಡ್ ಭಾರತ ಎ ಹಾಗೂ 19 ವಯೋಮಿತಿ ತಂಡಗಳೊಂದಿಗೆ ಮುಂದುವರೆಯುವುದು ಕಷ್ಟವಾಗಲಿದೆ. ಹೀಗಾಗಿ, ಮಾಜಿ ವೇಗಿ ಪರಾಸ್ ಮಾಂಬ್ರೆ ಹಾಗೂ ಅಭಯ್ ಶರ್ಮ ಅವರು ಸದ್ಯಕ್ಕೆ ಜೂನಿಯರ್ ತಂಡದ ನಿರ್ವಹಣೆ ಮಾಡಲಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿದೆ.
ಗೋಡೆ ಎಂದೇ ಖ್ಯಾತರಾಗಿರುವ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 25 ಸಾವಿರಕ್ಕೂ ಹೆಚ್ಚು ರನ್ಗಳಿಸಿದ ಭಾರತ ಎರಡನೇ ಬ್ಯಾಟ್ಸ್ಮನ್ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಕೇವಲ ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರವೇ ತೊಡಿಗಿಸಿಕೊಂಡಿಲ್ಲ. ಬದಲಾಗಿ ಅವರು ಚಿಲ್ಡ್ರನ್ಸ್ ಮೂಮೆಂಟ್ ಫಾರ್ ಸಿವಿಕ್ ಅವೆರ್ನಸ್, ಏಡ್ಸ್ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲೂ ಭಾಗಿಯಾಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.