ನಪೋಲಿ, ಜು 10 (Daijiworld News/MSP): ಇಟಲಿಯ ನಪೋಲಿಯಲ್ಲಿ ಜುಲೈ 3ರಿಂದ 14ರವರೆಗೆ ನಡೆಯಲಿರುವ ‘ ಯೂನಿವರ್ಸಿಯಾಡ್–2019’ ಕೂಟದಲ್ಲಿ ಭಾಗವಹಿಸಿ 100 ಮೀ ಓಟದಲ್ಲಿ ಚಿನ್ನದ ಪದಕವನ್ನು ಭಾರತದ ಓಟಗಾರ್ತಿ ದ್ಯುತಿ ಚಾಂದ್ ತನ್ನದಾಗಿಸಿಕೊಂಡಿದ್ದಾರೆ. ಹೀಗಾಗಿ ಈ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಓಟಗಾರ್ತಿ ಎಂಬ ಮೈಲಿಗಲ್ಲನ್ನು ದ್ಯುತಿ ಚಾಂದ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅಂತಿಮ ಸುತ್ತಿನಲ್ಲಿ ಓಟಗಾರ್ತಿ ದ್ಯುತಿ ಚಾಂದ್ ಅವರು 100ಮೀ ಅಂತರವನ್ನು 11.32 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಯೂನಿವರ್ಸಿಯಾಡ್ ಆವೃತ್ತಿಯಲ್ಲಿ 100 ಮೀ ಓಟದಲ್ಲಿ ಭಾರತದ ಓಟಗಾರ್ತಿ ಚಿನ್ನದ ಪದಕ ಗೆದ್ದಿರುವುದು ಇದೇ ಪ್ರಥಮವಾಗಿದೆ. ಇದಕ್ಕೆ ಮುಂಚೆ 100ಮೀ ವಿಭಾಗದ ಫೈನಲ್ಗೆ ಯಾರು ಅರ್ಹತೆಯನ್ನೂ ಕೂಡಾ ಪಡೆದಿರಲಿಲ್ಲ. ಹೀಗಾಗಿ ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ದಕ್ಕಿದೆ.
ಪದಕ ಗೆದ್ದ ಬಳಿಕ ಮಾತನಾಡಿದ ದ್ಯುತಿ ಚಾಂದ್ "ಯೂನಿವರ್ಸಿಯಾಡ್ ನಲ್ಲಿ ಸ್ವರ್ಣ ಪದಕ ಗೆದ್ದ ಬಗ್ಗೆ ಹೆಮ್ಮೆ ಎನಿಸುತ್ತದೆ. ನನಗೆ ಸದಾ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್, ನನ್ನ ರಾಜ್ಯದ ಜನತೆಗೆ ನಾನು ಈ ಪದಕವನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.