ಧರ್ಮಶಾಲಾ, ಡಿ. 15 (DaijiworldNews/AA): ನಾನು ಫಾರ್ಮ್ ಕಳೆದುಕೊಂಡಿಲ್ಲ. ನೆಟ್ಸ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್ಗಳಿಸುತ್ತಿಲ್ಲ ಅಷ್ಟೇ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 12 ರನ್ ಬಾರಿಸಿದ್ದ ಸೂರ್ಯ, ದ್ವಿತೀಯ ಪಂದ್ಯದಲ್ಲಿ 5 ರನ್ಗಳಿಸಿ ಔಟಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಮತ್ತೊಮ್ಮೆ 12 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸಿ ವರ್ಷಗಳೇ ಕಳೆದಿರುವುದರಿಂದ ಟೀಮ್ ಇಂಡಿಯಾ ನಾಯಕನ ಫಾರ್ಮ್ ಬಗ್ಗೆ ಪ್ರಶ್ನೆಗಳು ಮೂಡಿವೆ.
ಸೌತ್ ಆಫ್ರಿಕಾ ವಿರುದ್ಧ ಪಂದ್ಯ ಗೆದ್ದ ಬಳಿಕ ಬ್ಯಾಟಿಂಗ್ ಲಯ ಕಳೆದುಕೊಂಡಿರುವ ಬಗ್ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ಸೂರ್ಯಕುಮಾರ್ ಯಾದವ್ ನೀಡಿದ ಉತ್ತರದಿಂದಾಗಿ ಅವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.
"ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ನಾನು ಪ್ರಯತ್ನಿಸುತ್ತಿದ್ದೇನೆ. ನೆಟ್ಸ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್ಗಳು ಬರಬೇಕಾದಾಗ ಸಂದರ್ಭದಲ್ಲಿ ಖಂಡಿತವಾಗಿಯೂ ರನ್ ಬರುತ್ತವೆ. ಸದ್ಯ ನಾನು ಫಾರ್ಮ್ ಕಳೆದುಕೊಂಡಿಲ್ಲ. ರನ್ಗಳಿಸುತ್ತಿಲ್ಲ ಅಷ್ಟೇ" ಎಂದು ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ನೀಡಿದ ಈ ಹೇಳಿಕೆಯ ಬೆನ್ನಲ್ಲೇ ಅವರು ಟ್ರೋಲ್ಗೆ ಒಳಗಾಗಿದ್ದಾರೆ. 'ಅಭ್ಯಾಸದ ವೇಳೆ ರನ್ಗಳಿಸಿ ಪ್ರಯೋಜನವೇನು?', 'ಕಳೆದೊಂದು ವರ್ಷದಿಂದ ಒಂದೇ ಒಂದು ಅರ್ಧಶತಕ ಬಾರಿಸದೇ ಫಾರ್ಮ್ ಕಳೆದುಕೊಂಡಿಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ' ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.