ಲಕ್ನೋ, ಡಿ. 18(DaijiworldNews/TA): ಲಕ್ನೋದಲ್ಲಿ ನಡೆಯಬೇಕಿದ್ದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಹವಾಮಾನದ ಕಾರಣದಿಂದ ರದ್ದುಗೊಂಡಿದೆ. ಈ ನಡುವೆಯೇ ಟೀಂ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ವಿಮಾನ ನಿಲ್ದಾಣದ ಚೆಕ್-ಇನ್ ಸಾಲಿನಲ್ಲಿ ನಿಂತಿದ್ದ ಬುಮ್ರಾ, ಅಭಿಮಾನಿಯೊಬ್ಬರ ವರ್ತನೆಗೆ ತಾಳ್ಮೆ ಕಳೆದುಕೊಂಡಂತೆ ಕಾಣಿಸಿಕೊಂಡಿದ್ದಾರೆ. ಬುಮ್ರಾ ನಿಂತಿದ್ದ ಅದೇ ಸಾಲಿನಲ್ಲಿ ಇದ್ದ ಅಭಿಮಾನಿ, ಯಾವುದೇ ಅನುಮತಿ ಪಡೆಯದೆ ಸೆಲ್ಫಿ ವಿಡಿಯೋ ದಾಖಲಿಸಲು ಆರಂಭಿಸಿದ್ದಾನೆ.
ಈ ವಿಷಯ ಗಮನಿಸಿದ ಬುಮ್ರಾ, ಸೆಲ್ಫಿ ವಿಡಿಯೋ ಮಾಡದಂತೆ ಅಭಿಮಾನಿಗೆ ಮನವಿ ಮಾಡಿದ್ದಾರೆ. ಆದರೆ ಅಭಿಮಾನಿ ಬುಮ್ರಾ ಅವರ ಮಾತನ್ನು ನಿರ್ಲಕ್ಷಿಸಿ ವಿಡಿಯೋ ಚಿತ್ರೀಕರಣ ಮುಂದುವರಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಬುಮ್ರಾ, ಆ ಅಭಿಮಾನಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಎಸೆದಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಬುಮ್ರಾ ಅವರ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಅಭಿಮಾನಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.