ನವದೆಹಲಿ, ಜು11(Daijiworld News/SS): ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ಸ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್'ಗಳ ಸೋಲು ಅನುಭವಿಸಿದ ಟೀಂ ಇಂಡಿಯಾ ಬೇಸರ ಪಡಬೇಕಿಲ್ಲ. ಸೋಲು ಹಾಗೂ ಗೆಲುವುಗಳು ಜೀವನದ ಅವಿಭಾಜ್ಯ ಅಂಗ ಎಂದು ಪಂದ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನಿರಾಶಾದಾಯಕ ಫಲಿತಾಂಶ. ಆದರೂ ಟೀಂ ಇಂಡಿಯಾ ಜಿದ್ದಾಜಿದ್ದಿನ ಹೋರಾಟ ನೀಡಿತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್'ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಗೆಲುವು ಹಾಗೂ ಸೋಲುಗಳು ಜೀವನದ ಅವಿಭಾಜ್ಯ ಅಂಗ. ತಂಡದ ಮುಂದಿನ ಪ್ರಯತ್ನಕ್ಕೆ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು, ಇಂದು ಕೋಟ್ಯಾಂತರ ಹೃದಯಗಳು ಒಡೆದು ಹೋದವು. ಆದರೂ ನೀವು ಕೊನೆವರೆಗೂ ಹೋರಾಡುವ ಮೂಲಕ ನಮ್ಮ ಪ್ರೀತಿ ಮತ್ತು ಗೌರವಕ್ಕೆ ಅರ್ಹರಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಜಿಲೆಂಡ್ ನೀಡಿದ 240 ರನ್'ಗಳ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ಕಳಪೆ ಆರಂಭ ಕಂಡಿತು. ಮೇಲ್ಪಂಕ್ತಿಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ರವೀಂದ್ರ ಜಡೇಜಾ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊರತು ಪಡಿಸಿ ಬೇರೆ ಎಲ್ಲ ಬ್ಯಾಟ್ಸ್'ಮ್ಯಾನ್'ಗಳು ರನ್ ಬರ ಅನುಭವಿಸಿದರು.