ರಾಂಚಿ, ಡಿ. 24 (DaijiworldNews/AA): ರಾಂಚಿಯಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ 16 ಬೌಂಡರಿ, 15 ಸಿಕ್ಸ್ ಗಳೊಂದಿಗೆ ವೇಗದ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ.

ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಹೊಡೆದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತದ ಕಿರಿಯ ಆಟಗಾರ ಹಾಗೂ ಅತಿ ವೇಗದಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.
ಇದೀಗ ವೈಭವ್ ಸೂರ್ಯವಂಶಿ ಕೇವಲ 54 ಎಸೆತಗಳಲ್ಲಿ 150 ರನ್ ಸಿಡಿಸಿದ್ದಾರೆ. ಅಂತಿಮವಾಗಿ 84 ಎಸೆತಗಳನ್ನು ಎದುರಿಸಿದ ಅವರು 15 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 190 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 10 ರನ್ಗಳಿಂದ ದ್ವಿಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
ಕೇವಲ 54 ಎಸೆತಗಳಲ್ಲಿ 150 ರನ್ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಅವರು ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ ಅತೀ ವೇಗವಾಗಿ 150 ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಭಾರತದ ಪರ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪಂಜಾಬಿನ ಅನ್ಮೋಲ್ಪ್ರೀತ್ ಸಿಂಗ್ ಮೊದಲ ಸ್ಥಾನದಲ್ಲಿ ಇದ್ದಾರೆ.