ಬೆಂಗಳೂರು, ಡಿ. 25 (DaijiworldNews/TA): ವಿಜಯ ಹಝಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಆಂಧ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ ಗಳಿಸಿದ ಮೊದಲ ರನ್ನೊಂದಿಗೆ ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ 16,000 ರನ್ಗಳ ಗಡಿ ದಾಟಿದರು.
ಆಂಧ್ರ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿ 15,999 ರನ್ಗಳನ್ನು ಗಳಿಸಿದ್ದರು. ಒಂದು ರನ್ ದಾಖಲಿಸುವ ಮೂಲಕವೇ ಅವರು ಈ ಮಹತ್ವದ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 16 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ ಅವರು 391 ಇನಿಂಗ್ಸ್ಗಳಲ್ಲಿ 16,000 ರನ್ ಪೂರೈಸಿದ್ದರು. ಆದರೆ ವಿರಾಟ್ ಕೊಹ್ಲಿ ಕೇವಲ 330 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸಚಿನ್ ದಾಖಲೆಯನ್ನು ಮುರಿದರು.
ಈ ಮೂಲಕ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 16 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ಹೊಸ ವಿಶ್ವ ದಾಖಲೆ ಈಗ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ.