ಹೊಸದಿಲ್ಲಿ, ಜು 16(DaijiworldNews/SM): 2019ರ ವಿಶ್ವಕಪ್ ನಲ್ಲಿ ಅಂತಿಮ ಹಂತದಲ್ಲಿ ಸೋಲುಂಡಿರುವ ಟೀಂ ಇಂಡಿಯಾ ಹತ್ತು ಹಲವು ಟೀಕೆಗಳಿಗೆ ಗುರಿಯಾಗಿದೆ. ಈ ಮಧ್ಯೆ ಟೀಂ ಇಂಡಿಯಾಕ್ಕೆ ನೂತನ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ.
ಟೀಮ್ ಇಂಡಿಯಾಗೆ ನೂತನ ಕೋಚ್ ತರುವ ಆಲೋಚನೆಯಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಖ್ಯ ಕೋಚ್, ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಹಾಗೂ ಫೀಲ್ಡಿಂಗ್ ಕೋಚ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಿರುವ ಮುಖ್ಯ ಕೋಚ್ ರವಿ ಶಾಸ್ತ್ರಿಯವರ ಅವಧಿ ವಿಶ್ವಕಪ್ ನೊಂದಿಗೆ ಅಂತ್ಯಗೊಂಡಿದೆ. ಆದರೂ ಕೂಡ ತಂಡಕ್ಕೆ ನೇಮಕಾತಿ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಬಿಸಿಸಿಐ ಅನುಮತಿಸಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜುಲೈ 30, 2019ರ ಒಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಟೀಮ್ ಇಂಡಿಯಾದ ಕೋಚ್ ಹುದ್ದೆಗಾಗಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಅರ್ಜಿ ಸಲ್ಲಿಸಿದ್ದರು. ಇದೀಗ ಅನಿಲ್ ಕುಂಬ್ಳೆ ಅವರ ಅರ್ಜಿ ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪರಿಗಣಿಸಲಾಗುತ್ತದೆ. ಇವರನ್ನು ಹೊರತುಪಡಿಸಿ ಉಳಿದವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಕಳೆದ ಎರಡು ವರ್ಷಗಳಿಂದ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ 4ನೇ ಕ್ರಮಾಂಕದ ಬ್ಯಾಟಿಂಗ್ ಗೊಂದಲ ನಿವಾರಣೆ ಯಾಗದೇ ಇರುವ ಹಿನ್ನೆಲೆಯಲ್ಲಿ ರವಿ ಶಾಸ್ತ್ರಿ ಬಳಗದಲ್ಲಿನ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ಈ ಬಾರಿಯ ವಿಶ್ವಕಪ್ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೊನೆಯ ಹಂತದಲ್ಲಿ ಎಡವಿದ ಟೀಂ ಇಂಡಿಯಾ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆ, ತಂಡ ಹಾಗೂ ಕೋಚಿಂಗ್ ವಿಭಾಗದಲ್ಲಿ ಹತ್ತು ಹಲವು ಬದಲಾವಣೆಗಳನ್ನು ಮಾಡಲಾಗಿದೆ.