ನವದೆಹಲಿ, ಜು 17 (Daijiworld News/SM): ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಟೀಮ್ ಇಂಡಿಯಾದ ಬಾಗಿಲು ಮುಚ್ಚುವ ಕಾಲ ಸನಿಹವಾಗಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ನಲ್ಲಿ ನಡೆದ 12ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಹಂತದಲ್ಲಿ ಹೊರಬಿದ್ದಿತ್ತು. ವಿಶ್ವಕಪ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಹಾಗೂ ಈ ಬಾರಿಯ ವಿಶ್ವಕಪ್ ನಲ್ಲಿ ಧೋನಿಯವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡ್ಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಆದರೆ, ವಿಶ್ವಕಪ್ ಬಳಿಕ ಧೋನಿಯವರು ಮೌನವಾಗಿದ್ದಾರೆ. ಹಾಗೂ ನಿವೃತ್ತಿ ವಿಚಾರವನ್ನು ಸೀಕ್ರೆಟ್ ಆಗಿರಿಸಿದ್ದಾರೆ.
ಇದೇ ವೇಳೆ ಸೀಮಿತ ಓವರ್ಗಳ ತಂಡಕ್ಕೆ ಧೋನಿ ಅವರನ್ನು ಶಾಶ್ವತ ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಇತ್ತೀಚೆಗಷ್ಟೇ ಹೇಳಿದ್ದರು. ಇದೀಗ ವೆಸ್ಟ್ ಇಂಡೀಸ್ ಪ್ರವಾಸದಿಂದ ಧೋನಿ ಹೊರಗುಳಿದಿರುವಂತೆ ಬಹುತೇಕ ಸರಣಿಗಳಿಂದ ಅವರು ಮುಂದಿನ ದಿನಗಳಲ್ಲಿ ಅವರನ್ನು ಕೈ ಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಮಾಹಿ ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.