ಮುಂಬೈ, ಫೆ. 27 (DaijiworldNews/TA): ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದು, 72 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಸತತ ಎರಡನೇ ಸೋಲು ಕಂಡ ಜಿಂಬಾಬ್ವೆ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ದೊಡ್ಡ ಮೊತ್ತ ಕಲೆಹಾಕಿತು. 257 ರನ್ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಭಾರತ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಸಂಜು ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್ಗೆ 48 ರನ್ ಸೇರಿಸಿದರು. ಸಂಜು 24 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಎರಡನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನೀಡಿದರು. ಅಭಿಷೇಕ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಗಮನ ಸೆಳೆದರು. ಅವರು 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ಸೇರಿ 55 ರನ್ ಗಳಿಸಿದರು. ಇಶಾನ್ ಕಿಶನ್ 38 ರನ್ ಗಳಿಸಿ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 33 ರನ್ ಸಿಡಿಸಿ ರನ್ ವೇಗ ಹೆಚ್ಚಿಸಿದರು.
ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅಜೇಯ 84 ರನ್ಗಳ ಜೊತೆಯಾಟ ನೀಡಿ ತಂಡವನ್ನು 256 ರನ್ಗಳಿಗೆ ಕೊಂಡೊಯ್ದರು. ಹಾರ್ದಿಕ್ 23 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸೇರಿ ಅಜೇಯ 50 ರನ್ ಗಳಿಸಿದರೆ, ತಿಲಕ್ ವರ್ಮಾ 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹಿತ ಅಜೇಯ 44 ರನ್ ಬಾರಿಸಿದರು. 256 ರನ್ ಬೆನ್ನಟ್ಟಿದ ಜಿಂಬಾಬ್ವೆ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಬ್ರಿಯಾನ್ ಬೆನೆಟ್ ಮತ್ತು ತಡಿವಾನಾಶೆ ಮರುಮಾನಿ 44 ರನ್ ಸೇರಿಸಿದರು. ಬಳಿಕ ಅಕ್ಷರ್ ಪಟೇಲ್ ಮರುಮಾನಿ ಅವರನ್ನು ಔಟ್ ಮಾಡಿದರು.
ಸಿಕಂದರ್ ರಜಾ ಮತ್ತು ಬ್ರಿಯಾನ್ ಬೆನೆಟ್ ಮೂರನೇ ವಿಕೆಟ್ಗೆ 72 ರನ್ ಸೇರಿಸಿದರು. ರಜಾ 31 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಅರ್ಷದೀಪ್ ಸಿಂಗ್ ಪ್ರಮುಖ ವಿಕೆಟ್ಗಳನ್ನು ಪಡೆದು ಪಂದ್ಯವನ್ನು ಭಾರತದ ಪರ ತಿರುಗಿಸಿದರು. ಬ್ರಿಯಾನ್ ಬೆನೆಟ್ 59 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 97 ರನ್ ಗಳಿಸಿದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಒಟ್ಟಾರೆ ಭಾರತದ ಸಮಗ್ರ ಪ್ರದರ್ಶನದ ಎದುರು ಜಿಂಬಾಬ್ವೆಯ ಹೋರಾಟ ಫಲಕಾರಿಯಾಗದೆ ಉಳಿಯಿತು. ಈಗ ಎಲ್ಲರ ಗಮನ ಭಾರತದ ಮುಂದಿನ ನಿರ್ಣಾಯಕ ಪಂದ್ಯತ್ತ ನೆಟ್ಟಿದೆ.