ಕೋಲ್ಕತ್ತಾ, ಮಾ. 05 (DaijiworldNews/AK): ಫಿನ್ ಅಲೆನ್ ಅವರ ಸಿಡಿಲಬ್ಬರದ ಶತಕದ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ವನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಕಿವೀಸ್ ಫೈನಲ್ ಗೆ ಪ್ರವೇಶಿಸಿದೆ.

33 ಎಸೆತಗಳನ್ನು ಎದುರಿಸಿದ ಅಲೆನ್ ಬರೋಬ್ಬರಿ 8 ಸಿಕ್ಸರ್, 10 ಬೌಂಡರಿ ಹೊಡೆಯುವ ಮೂಲಕ ಸ್ಫೋಟಕ ಶತಕ ಬಾರಿಸಿದ ನ್ಯೂಜಿಲೆಂಡ್ನ ಜಯದ ರೂವಾರಿಯಾದರು. ಅಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿದರು. ಈಸ್ಟೋನಿಯಾದ ಸಾಹಿಲ್ ಚೌಹಾನ್ ಅವರು 2024 ರಲ್ಲಿ ಸಿಪ್ರಸ್ ತಂಡದ ವಿರುದ್ಧ 27 ಎಸೆತಗಳಲ್ಲಿ ಶತಕ ಗಳಿಸಿರುವುದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕವಾಗಿದೆ. ಇನ್ನು 2016 ರಲ್ಲಿ ವೆಸ್ಚ್ ಇಂಡೀಸ್ ನ ಕ್ರಿಸ್ ಗೇಲ್ ಅವರು ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಫೆ.5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದ ವಿಜೇತರು 8 ರಂದು ಅಹ್ಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಪಡಯಿತು. ಇದಕ್ಕೆ ನ್ಯೂಜಿಲೆಂಡ್ ತಂಡ 43 ಎಸೆತಗಳು ಹಾಗೂ 9 ವಿಕೆಟ್ಗಳು ಬಾಕಿ ಇರುವಂತೆ 9 ವಿಕೆಟ್ಗ ಗುರಿ ತಲುಪಿತು.