ಕೊಲಂಬೋ, ಮಾ. 05 (DaijiworldNews/AA): ಟಿ20 ವಿಶ್ವಕಪ್ ಟೂರ್ನಿಯಾಡಲು ಶ್ರೀಲಂಕಾಗೆ ಬಂದಿದ್ದ ಪಾಕಿಸ್ತಾನದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಅನುಚಿತ ವರ್ತನೆ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ.

ಆತಿಥೇಯ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಕೊನೆಯ ಸೂಪರ್ 8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಸಿಬ್ಬಂದಿ ಕೂಗುತ್ತಾ ಸಹಾಯಕ್ಕಾಗಿ ಕರೆ ಮಾಡಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಬಂದು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ಮಾಹಿತಿ ನೀಡಿದ್ದಾರೆ.
ಹೋಟೆಲ್ನ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿತು. ಆಟಗಾರನ ಪರವಾಗಿ ನವೈದ್ ಚೀಮಾ ಕ್ಷಮೆಯಾಚಿಸಿದ್ದು, ಅಸಭ್ಯವಾಗಿ ವರ್ತಿಸಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆಯಿದೆ ಮತ್ತು ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನಿ ಆಟಗಾರರು ಪ್ರವಾಸದ ಸಮಯದಲ್ಲಿ ಅಸಭ್ಯ ವರ್ತನೆ ತೋರುವುದು ಇದೇ ಮೊದಲೇನಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಾಕಿಸ್ತಾನ ಶಾಹೀನ್ಸ್ ತಂಡದ ಯುವ ಬ್ಯಾಟರ್ ಹೈದರ್ ಅಲಿಯನ್ನು ಕಳೆದ ವರ್ಷ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದರು. ಹೈದರ್ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಗೊಳಿಸಲಾಗಿತ್ತು.
ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಪ್ರವಾಸದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಮಸಾಜ್ ಪಟು ಮಲಾಂಗ್ ಅಲಿ ಅವರ ಮೇಲೂ ದೂರು ದಾಖಲಾಗಿದ್ದು, ದಂಡ ಕೂಡ ವಿಧಿಸಲಾಗಿತ್ತು.