ಮುಂಬೈ, ಮಾ. 10 (DaijiworldNews/AA): 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಟೀಂ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 131 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಬಾರ್ಬಡೋಸ್ನಲ್ಲಿ 2024ರ ಟಿ20 ವಿಶ್ವಕಪ್ ಗೆದ್ದಾಗ, ಬಿಸಿಸಿಐ 125 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತ್ತು. ಇದೀಗ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಗೆದ್ದಿದ್ದು, ಬಿಸಿಸಿಐ ಇನ್ನೂ ದೊಡ್ಡ ಬಹುಮಾನವನ್ನು ಘೋಷಣೆ ಮಾಡಿದೆ.
2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಗೆದ್ದ ಬೆನ್ನಲ್ಲೇ ಬಿಸಿಸಿಐ 131 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ. ಜೊತೆಗೆ 'ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಟ್ರೋಫಿಯನ್ನು ಎತ್ತಿಹಿಡಿಯಿತು. ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಸತತ 2ನೇ ಬಾರಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಉಳಿಸಿಕೊಂಡ ಮೊದಲ ತಂಡವಾಯಿತು. ಈ ಗೆಲುವಿನೊಂದಿಗೆ, ಭಾರತವು ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಮೊದಲ ತಂಡವಾಯಿತು' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಐತಿಹಾಸಿಕ ಸಾಧನೆಗಾಗಿ ಮಂಡಳಿಯು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರನ್ನು ಮತ್ತೊಮ್ಮೆ ಅಭಿನಂದಿಸುತ್ತದೆ. ಭವಿಷ್ಯದಲ್ಲಿ ಅವರಿಗೆ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತಾರೆ" ಎಂದು ಹೇಳಿದೆ.