ಇಸ್ಲಾಮಾಬಾದ್, ಮಾ. 10 (DaijiworldNews/AA): ಪಾಕಿಸ್ತಾನದಲ್ಲಿ ತೈಲ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್ಎಲ್)ಗೆ ಇದೀಗ ಇಂಧನದ ಕೊರತೆ ಎದುರಾಗಿದೆ. ಹೀಗಾಗಿ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಐಪಿಎಲ್ ಆರಂಭದ ಸಂದರ್ಭದಲ್ಲೇ ಟೂರ್ನಿ ಪ್ರಾರಂಭಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿತ್ತು. ಅದರಂತೆ ಮಾರ್ಚ್ 26 ರಿಂದ ಪಿಎಸ್ಎಲ್ ಆರಂಭಿಸಲು ನಿರ್ಧರಿಸಲಾಗಿತ್ತು. ಇದೀಗ ಪಾಕಿಸ್ತಾನದಲ್ಲಿ ಇಂಧನದ ಕೊರತೆ ಉಂಟಾಗಿರುವ ಹಿನ್ನೆಲೆ ಟೂರ್ನಿಯ ವೇಳಾಪಟ್ಟಿಯನ್ನು ಬದಲಿಸುವ ಸಾಧ್ಯತೆಯಿದೆ.
ಪಾಕಿಸ್ತಾನದಲ್ಲಿ ತೀವ್ರ ಇಂಧನ ಕೊರತೆಯಿದ್ದು, ಸರ್ಕಾರವು ಸಾರಿಗೆಯ ಮೇಲೆ ನಿರ್ಬಂಧ ಹೇರಿದೆ. ಇದರಿಂದ ತಂಡಗಳ ಪ್ರಯಾಣ ಮತ್ತು ಪಂದ್ಯದ ಪ್ರಸಾರಕ್ಕೆ ಅಡ್ಡಿಯಾಗುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ ಪಂಜಾಬ್ ಪ್ರಾಂತ್ಯದಲ್ಲಿ ಇಂಧನ ಉಳಿಸಲು ಶಾಲೆ-ಕಾಲೇಜುಗಳನ್ನು ಮಾರ್ಚ್ 31 ರವರೆಗೆ ಮುಚ್ಚಲು ಆದೇಶಿಸಲಾಗಿದೆ.
ಈಗಾಗಲೇ ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್, ಡಿಸೇಲ್ ಅಭಾವವಿದ್ದು, ಈ ಬಿಸಿ ಪಾಕಿಸ್ತಾನ್ ಸೂಪರ್ ಲೀಗ್ ಗೂ ಮುಟ್ಟಿದೆ. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಮುಂದೂಡುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಹೀಗಾಗಿ ಮಾರ್ಚ್ 26 ರಿಂದ ಪಿಎಸ್ಎಲ್ ಟೂರ್ನಿ ಆರಂಭವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.