ಬೆಂಗಳೂರು, ಮಾ. 12 (DaijiworldNews/TA): ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಸಮಯದಲ್ಲಿಯೇ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದೆ. ಗಂಭೀರ್ ಭಾರತೀಯ ತಂಡದ ಆಟಗಾರರಿಗೆ “ತಂಡದ ಗೆಲುವೇ ಮೊದಲನೆಯ ಉದ್ದೇಶ, ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಬೇಕು” ಎಂದು ಖಡಕ್ ಸೂಚನೆ ನೀಡಿದ್ದಾರೆ.

ಗಂಭೀರ್ ಹೇಳುವಂತೆ, ಶತಕ ಅಥವಾ ಅರ್ಧಶತಕಕ್ಕೆ ತಮ್ಮ ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ಬಿಟ್ಟು ಟ್ರೋಫಿ ಗೆಲ್ಲುವುದೇ ಮೊದಲ ಉದ್ದೇಶವಾಗಬೇಕು. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಂಡದ ಮೊತ್ತವನ್ನು ಹೆಚ್ಚಿಸಲು ಆಡಬೇಕು.
ಈ ಕುರಿತು ಗಂಭೀರ್ ಉದಾಹರಣೆಯಾಗಿ ಸಂಜು ಸ್ಯಾಮ್ಸನ್ ಅವರ ಆಟವನ್ನು ಮುಂದಿಟ್ಟಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಸಂಜು ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97, 89, 89 ರನ್ ಗಳಿಸಿದ್ದರು. ವೈಯಕ್ತಿಕ ಶತಕ ಗುರಿಗೆ ನಿಧಾನವಾಗಿ ಆಟವಾಡದೇ, ತಂಡದ ವೇಗಕ್ಕೆ ಆದ್ಯತೆ ನೀಡುವುದರಿಂದ ಭಾರತ ಗೆಲುವು ಸಾಧಿಸಿತು.
ಸ್ವಾರ್ಥಕ್ಕಾಗಿ ಆಡುವುದನ್ನು ನಿಲ್ಲಿಸಿ, ತಂಡದ ಗೆಲುವಿಗಾಗಿ ಆಡಬೇಕು. ಸೂಪರ್ ಸ್ಟಾರ್ ಹುಟ್ಟುಹಾಕುವುದಕ್ಕಿಂತ ಬಲಿಷ್ಠ ತಂಡ ರೂಪಿಸುವುದು ಮುಖ್ಯ. ಎಂದು ಗಂಭೀರ್ ಅವರು ಪುನರುಚ್ಚರಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ಇಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂಬರುವ ಏಕದಿನ ವಿಶ್ವಕಪ್ 2027ಗಾಗಿ ಗಂಭೀರ್ ನೀಡಿದ ಖಡಕ್ ಸೂಚನೆಗಳು ಯಾವ ಆಟಗಾರರಿಗೆ ಪ್ರೇರಣೆಯಾಗಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ, ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಗೌತಮ್ ಗಂಭೀರ್ ತಂಡದ ಗೆಲುವಿಗೆ ಆದ್ಯತೆ ನೀಡುವ ಮನಸ್ಥಿತಿಯನ್ನು ಬಲಪಡಿಸುತ್ತಿರುವುದಾಗಿ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ.