ನವದೆಹಲಿ, ಮಾ. 13 (DaijiworldNews/AA): ಸನ್ ರೈಸರ್ಸ್ ಲೀಡ್ಸ್ ತಂಡದ ಮಾಲಕಿ ಕಾವ್ಯ ಮಾರನ್ ಅವರು ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಒಡೆತನದ ಸನ್ರೈಸರ್ಸ್ ಲೀಡ್ಸ್ ತಂಡವು ಪಾಕ್ ತಂಡದ ಲೆಗ್-ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್(2.34 ಕೋಟಿ ರೂ.) ನೀಡಿ ಖರೀದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಐಪಿಎಲ್ ಫ್ರಾಂಚೈಸಿಗಳು ಪಾಕ್ ಕ್ರಿಕೆಟ್ ಆಟಗಾರರನ್ನು ಖರೀದಿ ಮಾಡುವುದಿಲ್ಲ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಸನ್ರೈಸರ್ಸ್ ಲೀಡ್ಸ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
2009 ರಿಂದ ಪಾಕಿಸ್ತಾನದ ಆಟಗಾರರು ಐಪಿಎಲ್ನಲ್ಲಿ ಆಟವಾಡುತ್ತಿಲ್ಲ. ಭಾರತ ಹಾಗೂ ಪಾಕಿಸ್ತಾನ ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.