ಮುಂಬೈ, ಮಾ. 15 (DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ 2026 ಸೀಸನ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ಫ್ರಾಂಚೈಸಿಗಳು ಪ್ರೀ-ಸೀಸನ್ ಕ್ಯಾಂಪ್ ಆರಂಭಿಸಿವೆ. ಈ ನಡುವೆ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್ಮೆಂಟ್ಗೆ ಹೊಸ ಶರತ್ತು ಒಡ್ಡಿದ್ದಾರೆ ಎಂಬ ಸುದ್ದಿ ಹೊರಬಂದಿದೆ.

ಐಪಿಎಲ್ 2026ರಲ್ಲಿ ತಾನು ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲು ಸಿದ್ಧನಿಲ್ಲ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅವರು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಈಗಾಗಲೇ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಸೀಸನ್ನಲ್ಲಿ ಕೇವಲ ಬ್ಯಾಟಿಂಗ್ಗೆ ಸೀಮಿತವಾಗದೆ, ಫೀಲ್ಡಿಂಗ್ ಸೇರಿ ಸಂಪೂರ್ಣ 40 ಓವರ್ಗಳ ಕಾಲ ಮೈದಾನದಲ್ಲೇ ಇರಲು ಬಯಸುತ್ತಿರುವುದಾಗಿ ರೋಹಿತ್ ತಿಳಿಸಿದ್ದಾರೆ. ಕಳೆದ ಸೀಸನ್ನಲ್ಲಿ ಅವರನ್ನು ಹೆಚ್ಚಾಗಿ ಸಬ್ಸ್ಟಿಟ್ಯೂಟ್ ಆಟಗಾರನಾಗಿ ಬಳಸಲಾಗಿತ್ತು. ಇದು ಅವರಿಗೆ ತೃಪ್ತಿಕರವಾಗಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಈ ಬಾರಿ ಸೀಸನ್ಗೆ ಸಿದ್ಧರಾಗಲು ರೋಹಿತ್ ಶರ್ಮಾ ಸುಮಾರು 11 ಕೆಜಿ ತೂಕ ಇಳಿಸಿಕೊಂಡು ಫಿಟ್ ಆಗಿರುವುದಾಗಿ ತಿಳಿದುಬಂದಿದೆ. ಸಂಪೂರ್ಣ ಪಂದ್ಯ ಆಡುವ ಸಾಮರ್ಥ್ಯ ನನಗಿದೆ ಎಂದು ತೋರಿಸಲು ಅವರು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮೈದಾನದಲ್ಲಿ ಹಿರಿಯ ಆಟಗಾರನಾಗಿ ಸಲಹೆ ನೀಡಲು ರೋಹಿತ್ ಸಂಪೂರ್ಣ ಸಮಯ ಮೈದಾನದಲ್ಲಿ ಇರುವುದರಿಂದ ತಂಡಕ್ಕೆ ಲಾಭವಾಗಬಹುದು ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇನ್ನೊಂದೆಡೆ, 38 ವರ್ಷದ ರೋಹಿತ್ ಶರ್ಮಾ ಕೇವಲ ಬ್ಯಾಟರ್ ಆಗಿರುವುದರಿಂದ ಕಳೆದ ಸೀಸನ್ನಲ್ಲಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲಾಗಿತ್ತು. ಇದೀಗ ಅವರು ಅದನ್ನು ನಿರಾಕರಿಸಿರುವುದು ಮುಂಬೈ ಇಂಡಿಯನ್ಸ್ ತಂಡದ ಯೋಜನೆಗೆ ಸವಾಲಾಗುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವಾರು ಆಲ್ರೌಂಡರ್ಗಳು ಮತ್ತು ಯುವ ಆಟಗಾರರು ಇದ್ದು, ರೋಹಿತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲಾಗದಿದ್ದರೆ ತಂಡದ ಸಂಯೋಜನೆ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ಕೆಲ ಯುವ ಆಟಗಾರರಿಗೆ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ರೋಹಿತ್ ಶರ್ಮಾ ಮೊದಲಿನಿಂದಲೂ ಐಪಿಎಲ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ನಿಯಮದಿಂದ ಭಾರತೀಯ ಆಲ್ರೌಂಡರ್ಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬುದು ಅವರ ಅಭಿಪ್ರಾಯ. ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಸ್ಪಷ್ಟ ಸಂದೇಶ ನೀಡಿರುವ ರೋಹಿತ್ ಶರ್ಮಾ, ಈ ಬಾರಿ ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ ಪೂರ್ಣ ಆಟಗಾರನಾಗಿ ಮೈದಾನಕ್ಕಿಳಿಯಲು ಸಿದ್ಧರಾಗಿದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಈಗ ಮುಂಬೈ ಇಂಡಿಯನ್ಸ್ ಈ ಸೀಸನ್ನಲ್ಲಿ ಯಾರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲಿದೆ ಎಂಬುದನ್ನು ಕಾದು ನೋಡಬೇಕಿದೆ.