ಅಬುಧಾಬಿ, ಮಾ. 16 (DaijiworldNews/AA): ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪ್ರಸಿದ್ಧ 'ಸ್ಲೋವರ್ ಬಾಲ್' ತಂತ್ರವನ್ನು ತಾನೇ ಕಲಿಸಿಕೊಟ್ಟಿದ್ದು ಎಂದು ಪಾಕಿಸ್ತಾನ್ ಮೂಲದ ಯುಎಇ ಕ್ರಿಕೆಟಿಗ ಝಹೂರ್ ಖಾನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಝಹೂರ್ ಖಾನ್, "ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಸ್ಲೋವರ್ ಎಸೆತಗಳನ್ನು ಎಸೆಯುತ್ತಿದ್ದಾರೆ. ಈ ಎಸೆತಗಳನ್ನು ಹೇಳಿಕೆ ಕೊಟ್ಟಿದ್ದು ನಾನು. ಇದಾದ ಬಳಿಕ ಬುಮ್ರಾ ನಿಧಾನಗತಿಯ ಎಸೆತಗಳ ಮೂಲಕ ಯಶಸ್ಸು ಸಾಧಿಸುತ್ತಿದ್ದಾರೆ" ತಿಳಿಸಿದ್ದಾರೆ.
"2019-2020ರಲ್ಲಿ ಯುಎಇ ನಲ್ಲಿ ನಡೆದ ಐಪಿಎಲ್ ಸಮಯದಲ್ಲಿ ನಾನು ಮುಂಬೈ ಇಂಡಿಯನ್ಸ್ ತಂಡ ನೆಟ್ ಬೌಲರ್ ಆಗಿದ್ದೆ. ಅಭ್ಯಾಸದ ವೇಳೆ ನಾನು ಎಸೆದ ಸ್ಲೋವರ್ ಬೌನ್ಸರ್ ಬ್ಯಾಟರ್ ಅನ್ನು ಸಂಪೂರ್ಣವಾಗಿ ಕಕ್ಕಾಬಿಕ್ಕಿ ಮಾಡಿತ್ತು. ಇದನ್ನು ಗಮನಿಸಿದ ಅಂದಿನ ಮುಂಬೈ ಕೋಚ್ಗಳಾದ ಶೇನ್ ಬಾಂಡ್ ಮತ್ತು ಮಹೇಲಾ ಜಯವರ್ಧನೆ ಆಶ್ಚರ್ಯಚಕಿತರಾಗಿದ್ದರು" ಎಂದಿದ್ದಾರೆ.
ಇದರಿಂದ ಪ್ರಭಾವಿತರಾದ ಜಸ್ಪ್ರೀತ್ ಬುಮ್ರಾ, ನನ್ನ ಬಳಿ ಬಂದು 'ಪಾಜಿ, ನಿಮ್ಮ ಗ್ರಿಪ್ ಹೇಗಿದೆ? ನನಗೆ ತೋರಿಸಿಕೊಡಿ' ಎಂದು ಕೇಳಿದ್ದರು. ಇದನ್ನು ನಾನು ವಿವರಿಸಿಕೊಟ್ಟಿದ್ದೆ. ಇನ್ನು ಕಲಿತ ಬಳಿಕ ಜಸ್ಪ್ರೀತ್ ಬುಮ್ರಾ 'ಇದು ನೆಕ್ಸ್ಟ್ ಲೆವೆಲ್ ತಂತ್ರ' ಎಂದು ಹೊಗಳಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.