ಬೆಂಗಳೂರು, ಮಾ. 27 (DaijiworldNews/AA): ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಶಾಸಕರಿಗೆ 1+1 ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ.

ನಾಳಿನ ಪಂದ್ಯಕ್ಕೆ ಆಹ್ವಾನ ನೀಡಲು ಇಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾದರು. ಈ ವೇಳೆ ಸಿಎಂ ಶಾಸಕರು ಐಪಿಎಲ್ ಟಿಕೆಟ್ ವಿಚಾರವಾಗಿ ಬೇಡಿಕೆ ಇಟ್ಟಿದ್ದಾರೆ. ನಾಲ್ಕು ಟಿಕೆಟ್ ಕೊಡಿ ಎಂದು ಕೇಳಿದ್ದಾರೆ.
ಇದಕ್ಕೆ ವೆಂಕಟೇಶ್ ಪ್ರಸಾದ್ ಒಪ್ಪಿಕೊಂಡಿದ್ದಾರೆ. ಕೆಎಸ್ಸಿಎ ಸದಸ್ಯರು ಆಗಿರುವ ಡಿಕೆಶಿ ಅವರು ಶಾಸಕರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಟಿಕೆಟ್ ಮಾರಾಟವಾಗಿರುವ ಕಾರಣ ನಾಳಿನ ಪಂದ್ಯಕ್ಕೆ 1+1 ಟಿಕೆಟ್, ಮುಂದೆ ನಡೆಯಲಿರುವ ಪಂದ್ಯಕ್ಕೆ ೪ ಟಿಕೆಟ್ ನೀಡುವ ಬಗ್ಗೆ ಕೆಎಸ್ಸಿಎ ಭರವಸೆ ನೀಡಿದೆ.