ಮುಂಬೈ, ಏ. 21 (DaijiworldNews/TA): ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಆಸ್ಟ್ರೇಲಿಯಾ ಮೂಲದ ಸ್ಪೋಟಕ ಬ್ಯಾಟರ್ ಜೋಶ್ ಇಂಗ್ಲಿಸ್ ತಮ್ಮ ದೀರ್ಘಕಾಲದ ಗೆಳತಿ ಮೇಗನ್ ಕಿನ್ಕಾರ್ಟ್ ಅವರನ್ನು ಏಪ್ರಿಲ್ 18, 2026ರಂದು ವಿವಾಹವಾಗಿದ್ದಾರೆ. ಪಶ್ಚಿಮ ಆಸ್ಟ್ರೇಲಿಯಾದ ಮಾರ್ಗರೆಟ್ ರಿವರ್ನಲ್ಲಿರುವ ಐಷಾರಾಮಿ ರೆಸಾರ್ಟ್ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ವಿವಾಹ ಸಮಾರಂಭ ನಡೆದಿದೆ.

ವಿವಾಹದ ಕಾರಣದಿಂದಾಗಿ ಇಂಗ್ಲಿಸ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಜಕೊಂಡಿರಲಿಲ್ಲ. ಈಗ ಮದುವೆ ಕಾರ್ಯಗಳು ಪೂರ್ಣಗೊಂಡಿದ್ದು, ಅವರು ಮುಂದಿನ ವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಮೇ 4ರಂದು ಅವರು ಎಲ್ಎಸ್ಜಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಲಕ್ನೋ ತಂಡಕ್ಕೆ ಇಂಗ್ಲಿಸ್ ಅವರ ಆಗಮನವು ಮಹತ್ವದ ಬಲವಾಗಿ ಪರಿಗಣಿಸಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಅವರ ಬಿರುಸಿನ ಬ್ಯಾಟಿಂಗ್ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಮತ್ತು ಆಕ್ರಮಣಶೀಲತೆಯನ್ನು ನೀಡಲಿದೆ ಎಂಬ ನಿರೀಕ್ಷೆಯಿದೆ.
ಇದಕ್ಕೂ ಮೊದಲು ಐಪಿಎಲ್ 2025ರಲ್ಲಿ ಜೋಶ್ ಇಂಗ್ಲಿಸ್ ಪಂಜಾಬ್ ಕಿಂಗ್ಸ್ ಪರ ಆಡಿದ್ದು, 11 ಇನಿಂಗ್ಸ್ಗಳಲ್ಲಿ ಒಂದು ಅರ್ಧಶತಕದೊಂದಿಗೆ ಒಟ್ಟು 278 ರನ್ ಗಳಿಸಿದ್ದರು. ಆ ಸೀಸನ್ನಲ್ಲಿ ತಂಡದ ಯಶಸ್ಸಿಗೆ ಅವರು ಪ್ರಮುಖ ಪಾತ್ರವಹಿಸಿದ್ದರು.
ಈ ಪ್ರದರ್ಶನದ ಹಿನ್ನೆಲೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅವರನ್ನು ಹರಾಜಿನಲ್ಲಿ 8.60 ಕೋಟಿ ರೂ.ಗೆ ಖರೀದಿಸಿತ್ತು. ಈಗ ಅವರ ಆಗಮನದೊಂದಿಗೆ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲ ಪಡೆಯಲಿದ್ದು, ಎಲ್ಎಸ್ಜಿ ಗೆಲುವಿನ ಹಾದಿಗೆ ಮರಳಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.