ಚೆನ್ನೈ, ಏ. 22 (DaijiworldNews/AA): ಸಿಎಸ್ಕೆ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಅವರು ಮಂಡಿರಜ್ಜು ಗಾಯದ ಕಾರಣದಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಆರ್ಸಿಬಿ ತಂಡದಲ್ಲಿರುವ ಪ್ರತಿಭಾವಂತ ಬ್ಯಾಟರ್ ವಿಹಾನ್ ಮಲ್ಹೋತ್ರಾ ಅವರನ್ನು 'ಪ್ಲೇಯರ್ ಲೋನ್' ಮೂಲಕ ಪಡೆಯಲು ಆರ್. ಅಶ್ವಿನ್ ಸಲಹೆ ನೀಡಿದ್ದಾರೆ.

ಗಾಯದ ಸಮಸ್ಯೆಯನ್ನು ಎದುರಿಸುತ್ತುರುವ ಸಿಎಸ್ಕೆ ತಂಡ ಗಾಯಾಳು ಆಯುಷ್ ಮ್ಹಾತ್ರೆಗೆ ಬದಲಾಗಿ ಆರ್ಸಿಬಿಯ ವಿಹಾನ್ ಮಲ್ಹೋತ್ರಾ ಅವರನ್ನು ಲೋನ್ ನಿಯಮದಡಿ ತಂಡಕ್ಕೆ ಸೇರಿಸಿಕೊಂಡು ಆಡಿಸಬೇಕು ಎಂದು ಆರ್. ಅಶ್ವಿನ್ ಸಲಹೆ ನೀಡಿದ್ದಾರೆ. ಸದ್ಯ ಅವರು ನೀಡಿರುವ ಸಲಹೆ ಹೊಸ ಚರ್ಚೆಗೆ ಕಾರಣವಾಗಿದೆ.
ಐಪಿಎಲ್ನಲ್ಲಿ ಹತ್ತಾರು ನಿಮಯಗಳಿವೆ. ಕೆಲವೊಂದನ್ನು ಅಪರೂಪಕ್ಕೆ ಬಳಸಲಾಗುತ್ತದೆ. ಕೆಲವೊಂದು ಈವರೆಗೂ ಬಳಸಲ್ಪಟ್ಟಿಲ್ಲ. ಅಂತಹ ನಿಯಮಗಳಲ್ಲಿ ಪ್ಲೇಯರ್ ಲೋನ್ ರೂಲ್ ಕೂಡ ಒಂದಾಗಿದೆ. ಪ್ಲೇಯರ್ ಲೋನ್ ನಿಯಮದ ಪ್ರಕಾರ, ಎರಡು ಪಂದ್ಯಕ್ಕಿಂತ ಕಡಿಮೆ ಆಡಿರುವ ಆಟಗಾರನನ್ನು ತಂಡಗಳು ಪರಸ್ಪರ ಹಂಚಿಕೊಳ್ಳಬಹುದಾಗಿದೆ.
2018ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಪ್ಲೇಯರ್ ಲೋನ್ ನಿಯಮವನ್ನು ಅಳವಡಿಸಲಾಯಿತು. ಗಾಯದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಇದನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಡಿಯಲ್ಲಿ ಒಂದು ಫ್ರಾಂಚೈಸಿಯು ಮತ್ತೊಂದು ತಂಡದಿಂದ ಆಟಗಾರನನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಅಥವಾ ಸಾಲವಾಗಿ ಪಡೆಯಬಹುದಾಗಿದೆ.