ಬೆಂಗಳೂರು, ಏ. 24 (DaijiworldNews/AA): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಇದು ಆರ್ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯವಾಗಿದೆ.

ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದ ಬಾರಿಯಾದ ಅಹಿತಕರ ಘಟನೆಯ ಹಿನ್ನೆಲೆ ಪೊಲೀಸರು ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಸುಮಾರು 2,300 ಪೊಲೀಸ್ ಸಿಬ್ಬಂದಿ ಪಂದ್ಯದ ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಡಿಸಿಪಿ, ಎಸಿಪಿ ಮತ್ತು ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ಜನರನ್ನು ನಿಯಂತ್ರಿಸಲು ಭದ್ರತಾ ಪ್ಲಾನ್ ಸಿದ್ಧಪಡಿಸಲಾಗಿದೆ.
ಸ್ಟೇಡಿಯಂ ಹತ್ತಿರದ ಹಲವು ರಸ್ತೆಗಳನ್ನು 'ನೋ ಪಾರ್ಕಿಂಗ್' ವಲಯಗಳೆಂದು ಘೋಷಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಟಿಕೆಟ್ ಅಕ್ರಮ ಮಾರಾಟಗಾರರ ಪತ್ತೆಗೆ ಸಿಸಿಬಿ ಪೊಲೀಸರು ಇಂದು ಮಫ್ತಿಯಲ್ಲಿ ಕ್ರೀಡಾಂಗಣದ ಸುತ್ತ ಕಾರ್ಯಾಚರಣೆ ನಡೆಸಲಿದ್ದಾರೆ. ಜೊತೆಗೆ ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳ ಮೊಬೈಲ್ ಕಳ್ಳತನ ಮಾಡುವ ತಂಡಗಳ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ.