ದೆಹಲಿ, ಏ. 25 (DaijiworldNews/AA): ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್ಗಿಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್ಗಿಡಿ ಅವರು ನೆಲಕ್ಕೆ ಬಿದ್ದಿದ್ದಾರೆ. ಬೀಳುವಾಗ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿದ್ದು, ಮೈದಾನದಲ್ಲೇ ನೋವಿನಿಂದ ನರಳಾಡಲಾರಂಭಿಸಿದ್ದಾರೆ.
ಎನ್ಗಿಡಿ ಅವರ ತಲೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಅವರಿಗೆ ಮೇಲೇಳಲು ಸಾಧ್ಯವಾಗಲಿಲ್ಲ. ಕೂಡಲೇ ಅವರಿಗೆ ಡೆಲ್ಲಿ ತಂಡದ ಫಿಸಿಯೋ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆದರೂ ಎನ್ಗಿಡಿ ಅವರಲ್ಲಿ ಚೇತರಿಕೆ ಕಾಣಿಸಲಿಲ್ಲ.
ಎನ್ಗಿಡಿ ಅವರಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಅವರನ್ನು ಡಗೌಟ್ಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ ಅದೂ ಸಾಧ್ಯವಾಗದ ಹಿನ್ನೆಲೆ ಕೂಡಲೇ ಆಂಬುಲೆನ್ಸ್ ಅನ್ನು ಮೈದಾನಕ್ಕೆ ಕರೆತಂದು ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಎನ್ಗಿಡಿ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಪಾಸಣೆ ಬಳಿಕವಷ್ಟೇ ಗಾಯದ ಗಂಭೀರತೆ ತಿಳಿದುಬರಬೇಕಿದೆ.